

ನವದೆಹಲಿ: ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬೋಯಿಂಗ್ 777 ವಿಮಾನಕ್ಕೆ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಪ್ರಸ್ತುತ ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗಿರುವ ಆ್ಯನಿ ದಿವ್ಯಾ, ಈ ವಿಮಾನದ ಅತ್ಯಂತ ಕಿರಿಯ ವಯಸ್ಸಿನ ಮಹಿಳಾ ಕಮಾಂಡರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ತಮ್ಮ 30ನೇ ವಯಸ್ಸಿನಲ್ಲಿ ದಿವ್ಯಾ ಪೈಲಟ್ ಆಗಿದ್ದು, ಬೋಯಿಂಗ್ 777 ವಿಮಾನದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಕೀರ್ತಿಗೆ ದಿವ್ಯಾ ಭಾಜನರಾಗಿದ್ದಾರೆ.
ಆ್ಯನಿ ದಿವ್ಯಾ ಜನಿಸಿದ್ದು ಪಂಜಾಬ್ ಪಠಾಣ್ ಕೋಟ್ ನಲ್ಲಿ.. ಅವರ ತಂದೆ ನಿವೃತ್ತ ಸೈನಿಕರಾಗಿದ್ದು, ಅವರು ಸೇನೆಯಿಂದ ನಿವೃತ್ತರಾದ ಬಳಿಕ ಅವರ ಕುಟುಂಬ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಸ್ಥಳಾಂತರವಾಗಿತ್ತು. ಆಗ ದಿವ್ಯಾ ಇನ್ನು ಪುಟ್ಟ ಹುಡುಗಿಯಾಗಿದ್ದರಂತೆ. ಚಿಕ್ಕವಯಸ್ಸಿನಿಂದಲೇ ಆಂಧ್ರ ಪ್ರದೇಶದಲ್ಲಿ ಬೆಳೆದ ದಿವ್ಯಾಗೆ ಪೈಲಟ್ ಆಗಬೇಕು ಎಂಬ ಮಹದಾಸೆ ಇತ್ತಂತೆ. ಅದೇ ನಿಟ್ಟಿನಲ್ಲಿ ಅಭ್ಯಾಸ ಮಾಡಿದ ದಿವ್ಯಾ ಕೊನೆಗೂ ಪೈಲಟ್ ಆಗುವ ಮೂಲಕ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ.
ಇನ್ನು ಈ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುವ ದಿವ್ಯಾ, ನನ್ನ ಸಾಧನೆ ಏನೇ ಇದ್ದರೂ ಅದು ನನ್ನ ಪೋಷಕರಿಗೆ ಸಲ್ಲಬೇಕು. ತುಂಬಾ ಕಷ್ಟ ಪಟ್ಟು ನನ್ನ ವಿಧ್ಯಾಭ್ಯಾಸ ಮಾಡಿಸಿದ್ದಾರೆ. ಅಡೆತಡೆಗಳಿಲ್ಲದೇ ಯಾವುದೇ ಪ್ರಯಾಣ ಕೂಡ ಪೂರ್ಣವಾಗುವುದಿಲ್ಲ. ಹಾಗೆಯೇ ನನ್ನ ಜೀವನದಲ್ಲಿಯೂ ಕೂಡ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ನನ್ನ ಚಿಕ್ಕವಯಸ್ಸಿನಲ್ಲೇ ನಾವು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದೆವು. ನಮ್ಮದು ಮಧ್ಯಮವರ್ಗದ ಕುಟುಂಬವಾಗಿದ್ದು, ಸಾಕಷ್ಟು ಆರ್ಥಿಕ ಸಮಸ್ಯೆಗಳಿದ್ದವು ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ಪೈಲಟ್ ತರಬೇತಿ ಕುರಿತು ಮಾತನಾಡಿದ ದಿವ್ಯಾ, ಮನೆಯಲ್ಲಿ ನಾವು ತೆಲುಗು ಮಾತನಾಡುತ್ತಿದ್ದರಿಂದ ಅನ್ಯ ಭಾಷೆಗಳ ಪರಿಚಯವೇ ನನಗಿರಲಿಲ್ಲ. ಹೀಗಾಗಿ ನಮಗೆ ಪೈಲಟ್ ತರಬೇತಿ ವೇಳೆ ಭಾಷಾ ಸಮಸ್ಯೆ ಎದುರಾಗುತ್ತಿತ್ತು. ಅಂತೆಯೇ ತರಬೇತಿಗೆ ಬಂದವರೆಲ್ಲರೂ ವಿವಿಧ ರಾಜ್ಯ, ವಿವಿಧ ಧರ್ಮ ಹಾಗೂ ವಿವಿಧ ಸಂಸ್ಕೃತಿಗೆ ಸೇರಿದವರಾಗಿದ್ದರಂದ ಆರಂಭದಲ್ಲಿ ಸಾಕಷ್ಟು ಗೊಂದಲಗಳು ಎದುರಾಗುತ್ತಿತ್ತು. ಇನ್ನು ನಾನು ಕಲಿಯುತ್ತಿದ್ದ ವಿಜಯವಾಡದಲ್ಲಿ ಯಾರೂ ಕೂಡ ಪೈಲಟ್ ತರಬೇತಿ ಸೇರುತ್ತಿರಲಿಲ್ಲ. ಹೀಗಾಗಿ ವಿವಿಧ ರಾಜ್ಯಗಳಿಂದ ಬಂದವರು ತರಬೇತಿ ಪಡೆಯುತ್ತಿದ್ದರು. ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೆ. ಬಳಿಕ ಸತತವಾಗಿ ಬರೆಯುವ ಮೂಲಕ ಮತ್ತು ಓದುವ ಮೂಲಕ ಆಂಗ್ಲ ಭಾಷೆಯನ್ನು ಕಲಿತೆ. ಆದರೆ ನನ್ನ ಪೋಷಕರು ಮತ್ತು ಸ್ನೇಹಿತರ ನೆರವನಿಂದಾಗಿ ನಾನು ಈ ಎಲ್ಲ ತಡೆಗಳನ್ನು ಮೆಟ್ಟಿ ಪೈಲಟ್ ಆಗಿದ್ದೇನೆ. ನನ್ನ ತರಬೇತಿ ಅಕಾಡೆಮಿ ಕೂಡ ನನ್ನನ್ನು ಸಾಕಷ್ಟು ಪ್ರೋತ್ಸಾಹಿಸಿತು ಎಂದು ದಿವ್ಯಾ ಹೇಳಿಕೊಂಡಿದ್ದಾರೆ.
Advertisement