ಚೀನಾ ರಾಯಭಾರಿ ಭೇಟಿ ನಿಜ; ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವುದು ನನ್ನ ಜವಾಬ್ದಾರಿ: ರಾಹುಲ್

ಚೀನಾ ರಾಯಭಾರಿ ಭೇಟಿ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಿದ್ದು, ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಚೀನಾ ರಾಯಭಾರಿ ಭೇಟಿ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಿದ್ದು, ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಡೊಕ್ಲಾಮ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಂಡೋ-ಚೀನಾ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೇ ಕಾರಣಕ್ಕಾಗಿ ನಾನು ನಮ್ಮ ಮಾಜಿ ರಕ್ಷಣಾ ಸಲಹೆಗಾರರಾದ ಶಿವಶಂಕರ್ ಮೆನನ್ ರೊಂದಿಗೆ ಚೀನಾ ರಾಯಭಾರಿ ಹಾಗೂ ಭೂತಾನ್ ರಾಯಭಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ತಮ್ಮ ಕೆಲಸಕ್ಕೆ ಟೀಕಿಸುತ್ತಿರುವ ಬಿಜೆಪಿ, ತನ್ನ ಸಂಪುಟದ ಮೂವರು ಸಚಿವರ ಕಾರ್ಯವನ್ನು ಮರೆಮಾಚುತ್ತಿದೆ. ಈ ಹಿಂದೆ ಡೊಕ್ಲಾಂ ವಿವಾದದ ನಡುವೆಯೇ ಕೇಂದ್ರ ಸಚಿವರಾದ ಪ್ರಕಾಶ್ ಜವೇಡಕರ್, ಜೆಪಿ ನಡ್ಡಾ ಹಾಗೂ ಮಹೇಶ್ ಶರ್ಮಾ ಅವರು ಚೀನಾ ಪ್ರವಾಸ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರಕ್ಕೆ ನನ್ನ ಭೇಟಿ ಬಗ್ಗೆ ಚಿಂತೆಯಾಗಿದ್ದರೆ, ಈ ಮೂವರ ಸಚಿವರ ಚೀನಾ ಪ್ರವಾಸದ ಕುರಿತೂ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೇವಾಲ ಹಾಗೂ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರು, ಸೌಜನ್ಯದ ಆಧಾರದಲ್ಲಿ ಚೀನಾ ರಾಯಭಾರಿ ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕೇವಲ ಚೀನಾರಾಯಭಾರಿ ಮಾತ್ರವಲ್ಲ ಭೂತಾನ್ ರಾಯಭಾರಿಗಳೂ ಕೂಡ ಭೇಟಿಯಾಗಿದ್ದರು ಎಂದು ಹೇಳಿದ್ದಾರೆ. ಪ್ರಮುಖವಾಗಿ ಜಿ5 ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ನಮ್ಮ  ನೆರೆಹೊರೆ ರಾಷ್ಟ್ರಗಳ ಪ್ರತಿನಿಧಿಗಳು ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಭೇಟಿಯಾಗುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಅಂತೆಯೇ ಇದು ಸಾಮಾನ್ಯ ಭೇಟಿ ಎಂದು ಹೇಳಿರುವ ನಾಯಕರು, ಇದಕ್ಕೆ ಬೇರಿ ರೀತಿಯ ಅರ್ಥ ಕಲ್ಪಿಸುವುದು ಬೇಡ. ಇದೊಂದು ಕೇವಲ ಸೌಜನ್ಯ ಆಧಾರದ ಭೇಟಿಯಾಗಿತ್ತು ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ನಮ್ಮ  ಪಕ್ಷದ ಹಿರಿಯ ಮುಖಂಡರು ರಾಷ್ಟ್ರೀಯ ಹಿತಾಸಕ್ತಿಯನ್ನು ಮನಗಂಡವರಾಗಿದ್ದು, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com