ಐಐಟಿ ಪ್ರವೇಶ ಪರೀಕ್ಷೆ ಕೌನ್ಸೆಲಿಂಗ್ ಗೆ ನೀಡಿದ್ದ ತಡೆ ತೆರವುಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಈ ಹಿಂದೆ ಐಐಟಿ ಪ್ರವೇಶ ಪರೀಕ್ಷೆ ಕೌನ್ಸಲಿಂಗ್ ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತೆರವುಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಅಲ್ಲದೆ ಈ ಪ್ರಕರಣ ಸಂಬಂಧ ಯಾವುದೇ ಹೈಕೋರ್ಟ್ ಮಧ್ಯ ಪ್ರವೇಶ ಮಾಡಬಾರದೂ ಎಂದೂ ಸೂಚನೆ ನೀಡಿದ್ದಾರೆ.
ಈ ಸಾಲಿನ ಐಐಟಿ ಜಂಟಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳಲ್ಲಿ ಕೆಲವು ತಪ್ಪಾಗಿದ್ದವು. ಅದಕ್ಕೆ ಪರಿಹಾರಾತ್ಮಕವಾಗಿ ಪರೀಕ್ಷೆ ಬರೆದ ಎಲ್ಲಾ ಪರೀಕ್ಷಾರ್ಥಿಗಳಿಗೂ ಹೆಚ್ಚುವರಿ ಅಂಕ ನೀಡಲಾಗಿತ್ತು. ಇದರ ವಿರುದ್ಧ 0ಕೆಲವು ಪರೀಕ್ಷಾರ್ಥಿಗಳು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಳೆದ ಜುಲೈ 7ರಂದು ಆ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎ.ಎಂ. ಖಾನ್ವಿಲ್ಕರ್ ಅವರಿದ್ದ ಪೀಠವು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶ ಬರುವವರೆಗೂ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆ ನಡೆಸಬೇಡಿ’ ಎಂದು ಆದೇಶಿಸಿ ಕೌನ್ಸೆಲಿಂಗ್ ತಡೆಯಾಜ್ಞೆ ನೀಡಿತ್ತು.
ಇಂದು ಅದರ ಮುಂದುವರೆದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆಯನ್ನು ತೆರವುಗೊಳಿಸಿದೆ. "ಪ್ರವೇಶ ಪರೀಕ್ಷೆ ಹಾಗೂ ವಿದ್ಯಾರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತದೆ. ಅಂತೆಯೇ ಹೈಕೋರ್ಟ್ ಗಳೂ ಕೂಡ ಈ ಪ್ರಕರಣ ಸಂಬಂಧ ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ