
ಇಟಾ ನಗರ: ಅರುಣಾಚಲ ಪ್ರದೇಶದಲ್ಲಿ ಭಾರಿ ಕುಸಿತ ಸಂಭವಿಸಿದ್ದು, ಕನಿಷ್ಟ 14ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಅರುಣಾಚಲ ಪ್ರದೇಶದ ಪಪುಂಪೇರ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಸುಮಾರು 3.30ರ ಸಂದರ್ಭದಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ವೇಳೆ ಹಲವರ ಮೇಲೆ ಮಣ್ಣಿನ ಅವಶೇಷ ಬಿದ್ದಿದೆ. ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ಕನಿಷ್ಠ 14 ಮಂದಿ ಸಾವಿಗೀಡಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳದ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಣಿವೆ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಇದೇ ಕಾರಣಕ್ಕೆ ಭೂಮಿ ಸಡಿಲಗೊಂಡು ಭೂಕುಸಿತ ಸಂಭವಿಸಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಉಪಾಯುಕ್ತ ಜಲಾಶ್ ಪರ್ಟಿನ್ ಅವರು ಘಟನೆಯಲ್ಲಿ ಬದುಕುಳಿದಿರುವವರ ಸಾಧ್ಯತೆ ತೀರಾ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಪಪುಂಪೇರ್ ಜಿಲ್ಲೆ ಕುಗ್ರಾಮ ಮತ್ತು ಗುಡ್ಡಗಾಡು ಪ್ರದೇಶಳಿಂದ ಆವೃತ್ತವಾಗಿರುವುದರಿಂದ ಕಾರ್ಯಾಚರಣೆಗೆ ಕೊಂಚ ತಡವಾಗುತ್ತಿದೆ ಎಂದು ಹೇಳಿದ್ದಾರೆ.
Advertisement