ಮಧ್ಯ ಪ್ರದೇಶ: ಸರ್ಕಾರಿ ಶಾಲೆಯೊಂದರ ಶೌಚಾಲಯವೇ ಪ್ರಾಂಶುಪಾಲರ ಕಚೇರಿ!

ಒಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ಬಯಲು ಮಲ ವಿಸರ್ಜನೆ ಮುಕ್ತ...
ಮಧ್ಯ ಪ್ರದೇಶದ ಸಿಯೊನಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲರ ಕಚೇರಿ(ಯೂಟ್ಯೂಬ್ ನಿಂದ ಪಡೆದ ಚಿತ್ರ)
ಮಧ್ಯ ಪ್ರದೇಶದ ಸಿಯೊನಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲರ ಕಚೇರಿ(ಯೂಟ್ಯೂಬ್ ನಿಂದ ಪಡೆದ ಚಿತ್ರ)
ಭೋಪಾಲ್: ಒಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ಬಯಲು ಮಲ ವಿಸರ್ಜನೆ ಮುಕ್ತ ದೇಶವನ್ನಾಗಿ ಮಾಡಬೇಕೆಂದು ಪಣ ತೊಟ್ಟಿದ್ದರೆ ಇನ್ನೊಂದೆಡೆ ಅವ್ಯವಸ್ಥೆಗೆ ಸ್ಪಷ್ಟ ನಿದರ್ಶನವೆಂಬಂತೆ ಬಿಜೆಪಿ ಸರ್ಕಾರವಿರುವ ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕರ ಶೌಚಾಲಯ ಕಟ್ಟಡ ಪ್ರಾಂಶುಪಾಲರ ತಾತ್ಕಾಲಿಕ ಕಚೇರಿಯಾಗಿ ಮಾರ್ಪಟ್ಟಿದೆ.
ಅಲ್ಲದೆ ಶೌಚಾಲಯದ ಗೋಡೆ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ಖ್ಯಾತ ವ್ಯಕ್ತಿಗಳ ಭಾವಚಿತ್ರಗಳನ್ನು ನೇತುಹಾಕಲಾಗಿದೆ.
ಪ್ರೌಢಶಾಲೆಯ ಬಾಲಕರ ಶೌಚಾಲಯವನ್ನು ತಮ್ಮ ಕಚೇರಿ ಸ್ಥಳವನ್ನಾಗಿ ಪ್ರಾಂಶುಪಾಲ ಮನೀಶ್ ಮಿಶ್ರಾ ಮಾಡಿಕೊಂಡಿದ್ದಾರೆ. ಇದು ನಡೆದಿರುವುದು ಭೋಪಾಲ್ ನಿಂದ 350 ಕಿಲೋ ಮೀಟರ್ ದೂರದಲ್ಲಿ ಸಿಯೋನಿ ಜಿಲ್ಲೆಯ ಪಹರಿ ಎಂಬ ಗ್ರಾಮದಲ್ಲಿ. ಬಾಲಕರು ಬಹಿರ್ದೆಸೆಗಾಗಿ ಶಾಲೆಯ ಹೊರಗೆ ಬಯಲನ್ನು ಆಶ್ರಯಿಸಿಕೊಂಡಿದ್ದಾರೆ.
ದುರಂತವೆಂದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರ ಕ್ಷೇತ್ರವಾದ ಬುಡಕಟ್ಟು ಜನರು ಹೆಚ್ಚು ವಾಸಿಸುತ್ತಿರುವ ಸಿಯೊನಿ ಜಿಲ್ಲೆಯ ಮಂಡ್ಲ ಕ್ಷೇತ್ರದಲ್ಲಿ ಈ ಶಾಲೆಯಿದೆ.
ಸುಮಾರು 300 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯವಿರುವುದು ಪುಣ್ಯವೇ ಸರಿ.
ಈ ಶಾಲೆಯಲ್ಲಿ ಮಕ್ಕಳಿಗೆ ಆಟವಾಡಲು ಕ್ರೀಡಾಂಗಣ ಕೂಡ ಇಲ್ಲ. ಸ್ಥಳದ ಅಭಾವದಿಂದಾಗಿ ಶಾಲೆಯ ಪ್ರಯೋಗಾಲಯವನ್ನು ಗ್ರಂಥಾಲಯ ಮತ್ತು ಶಿಕ್ಷಕರ ತಾತ್ಕಾಲಿಕ ಕೊಠಡಿಯನ್ನಾಗಿ ಮಾಡಲಾಗಿದೆ.
ಈ ಶಾಲೆಯನ್ನು ನಮಗೆ 2014-15ರಲ್ಲಿ ನೀಡಲಾಯಿತು. 9 ಮತ್ತು 10ನೇ ತರಗತಿಯಲ್ಲಿ ಎರಡು ವಿಭಾಗಗಳಿವೆ. ಆದರೆ ಇರುವುದು ಮಾತ್ರ ಮೂರೇ ತರಗತಿ ಕೊಠಡಿಗಳು. ಹೀಗಾಗಿ ನಾವು ಪ್ರಾಂಶುಪಾಲರ ಕಚೇರಿಯನ್ನು ನಾಲ್ಕನೇ ತರಗತಿಯನ್ನಾಗಿ ಮಾಡಿದೆವು. ನಮಗೆ ಬೇರೆ ಆಯ್ಕೆಗಳಿರಲಿಲ್ಲ. ಹೀಗಾಗಿ ಬಾಲಕರ ಶೌಚಾಲಯವನ್ನು ತಾತ್ಕಾಲಿಕವಾಗಿ ಕಚೇರಿಯನ್ನಾಗಿ ಮಾಡಿಕೊಂಡಿದ್ದೇವೆ ಎಂದು ಪ್ರಾಂಶುಪಾಲ ಮನೀಶ್ ಮಿಶ್ರಾ ಹೇಳಿದರು.
ಆದರೆ ಕೇಂದ್ರ ಸಚಿವ ಫಗ್ಗನ್ ಸಿಂಗ್ ಅವರ ಅಭಿಪ್ರಾಯವನ್ನು ಕೇಳಿದರೆ ಅವರು ಪ್ರಾಂಶುಪಾಲರದ್ದು ತಪ್ಪು ಎಂದು ಬೊಟ್ಟು ಮಾಡಿ ತೋರಿಸುತ್ತಾರೆ. ಶಾಲೆಯ ಮುಖ್ಯಸ್ಥರಾಗಿರುವ ಪ್ರಾಂಶುಪಾಲರು ಸರಿಯಾದ ವ್ಯವಸ್ಥೆ ನೋಡಿಕೊಳ್ಳಬೇಕು. ಅವರೊಬ್ಬ ಮೂರ್ಖ, ಅವರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ.
ಇಂತಹ ಕ್ಷುಲ್ಲಕ ಪ್ರಶ್ನೆಗಳನ್ನು ತಮ್ಮಲ್ಲಿ ಕೇಳಬೇಡಿ ಎಂದು ಕೂಡ ಸಚಿವರು ಸುದ್ದಿಗಾರರಿಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com