ದಾಖಲೆ ಪ್ರಮಾಣಕ್ಕೆ ಕುಸಿದ ಹಣದುಬ್ಬರ; ಕೈಗಾರಿಕಾ ಅಭಿವೃದ್ಧಿ ಶೇ.1.7ಕ್ಕೆ ಇಳಿಕೆ!
ನವದೆಹಲಿ: ಕೇವಲ ಒಂದು ತಿಂಗಳಲ್ಲೇ ಚಿಲ್ಲರೆ ಹಣದುಬ್ಬರ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮೇ ತಿಂಗಳಲ್ಲಿ ಶೇ. 2.18ರಷ್ಟಿದ್ದ ಹಣದುಬ್ಬರ ಮೇ ಅಂತ್ಯದ ವೇಳೆಗೆ ಶೇ.1.54 ಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ.
ಕೇಂದ್ರದ ಅಂಕಿಅಂಶಗಳ ಕಚೇರಿ ಸಚಿವಾಲಯ ಹಣದುಬ್ಬರ ಅಂಕಿ ಅಂಶವನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷ ಶೇ.8ರಷ್ಟಿದ್ದ ಕೈಗಾರಿಕಾ ಅಭಿವೃದ್ಧಿ ಪ್ರಮಾಣ ಈ ವರ್ಷ ಮೇ ಅಂತ್ಯದ ವೇಳೆಗೆ ಶೇ.1.7ಕ್ಕೆ ಕುಸಿದಿದೆ. ಅಂತೆಯೇ ಚಿಲ್ಲರೆ ಹಣ ದುಬ್ಬರ ಕೂಡ ದಾಖಲೆ ಪ್ರಮಾಣದ ಇಳಿಕೆ ಕಂಡಿದ್ದು, ಮೇ ತಿಂಗಳಲ್ಲಿ ಶೇ. 2.18ರಷ್ಟಿದ್ದ ಚಿಲ್ಲರೆ ಹಣದುಬ್ಬರ ಜೂನ್ ಅಂತ್ಯದ ವೇಳೆಗೆ ಶೇ.1.54ಕ್ಕೆ ಇಳಿಕೆಯಾಗಿದೆ.
ಅಂತೆಯೇ ಆರ್ ಬಿಐ ನಿಗದಿಪಡಿಸಿದ್ದ ಮಧ್ಯಮಾವಧಿ ಗುರಿ ಶೇ.4ಕ್ಕಿಂತಲೂ ಪ್ರಸ್ತುತ ಹಣದುಬ್ಬರ ದರ ಕಡಿಮೆಯಾಗಿದೆ. ಚಿಲ್ಲರೆ ಆಹಾರ ವಸ್ತುಗಳ ಬೆಲೆಗಳು ಹಿಂದಿನ ವರ್ಷದ ಇದೇ ಅವಧಿಗಿಂತ ಶೇ 1.05ರಷ್ಟು ಕಡಿಮೆಯಾಗಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಅಂತೆಯೇ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ ಅನ್ವಯ ಕೈಗಾರಿಕಾ ಉತ್ಪಾದನೆಯ ಅಭಿವೃದ್ಧಿ ದರ ಕೂಡ ಶೇ.2.3ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಈ ಪ್ರಮಾಣ 7.3ರಷ್ಟಿತ್ತು ಎಂದು ತಿಳಿದುಬಂದಿದೆ.
ಇನ್ನು ಹೂಡಿಕೆ ಪ್ರಮುಖ ಸೂಚ್ಯಂಕವಾಗಿ ಗುರುತಿಸಲ್ಪಡುವ ಬಂಡವಾಳ ಸರಕುಗಳ ಉತ್ಪಾದನೆ ಕೂಡ ಶೇ.3.9ಕ್ಕೆ ಕುಸಿತವಾಗಿದ್ದು, 2016ರ ಮೇ ತಿಂಗಳಲ್ಲಿ ಈ ಪ್ರಮಾಣ 13.9ರಷ್ಟಿತ್ತು. ಅಂತೆಯೇ ಗ್ರಾಹಕ ಬಳಕೆ ವಸ್ತುಗಳ ಉತ್ಪಾದನಾ ವಿಭಾಗದಲ್ಲಿಯೂ ಕೂಡ ಇಳಿಕೆ ಕಂಡುಬಂದಿದ್ದು, ಗಣಿಗಾರಿ ವಿಭಾಗದಲ್ಲಿ 0.9ರಷ್ಟು ಉತ್ಪಾದನಾ ಇಳಿಕೆಯಾಗಿದೆ. ಉತ್ಪಾದನ ವಿಭಾಗ ಪ್ರಗತಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 8.6ರಷ್ಟಿದ್ದ ಉತ್ಪಾದನ ಪ್ರಗತಿ ಪ್ರಮಾಣ ಕೇವಲ 1.2ಕ್ಕೆ ಇಳಿಕೆಯಾಗಿದೆ.
ಉಳಿದಂತೆ ಮುಂದಿನ ತಿಂಗಳು ಆರ್ಥಿಕ ನೀತಿ ಪ್ರಕಟಿಸಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಹಣದುಬ್ಬರದ ಪರಿಣಾಮ ತನ್ನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ