
ನವದೆಹಲಿ: ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಹಿರಿಯ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರು ಹೇಳಿದ್ದಾರೆ.
ತಮ್ಮ "ಗಾಂಧಿ ಬಳಿಕದ ಭಾರತ" ಪುಸ್ತಕದ 10ನೇ ವಾರ್ಷಿಕೋತ್ಸವದ ವಿಶೇಷ ಆವೃತ್ತಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ಗುಹಾ ಅವರು, ಪ್ರಸ್ತುತ ಕಾಂಗ್ರೆಸ್ ಹಾಗೂ ನಿತೀಶ್ ಕುಮಾರ್ ಅವರ ಪರಿಸ್ಥಿತಿ ಒಂದೇ ತೆರನಾಗಿದ್ದು, ಕಾಂಗ್ರೆಸ್ ನಾಯಕನಿಲ್ಲದ ಪಕ್ಷವಾಗಿದ್ದರೆ, ನಿತೀಶ್ ಕುಮಾರ್ ಅವರು ಪಕ್ಷವಿಲ್ಲದ ನಾಯಕರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ನಿತೀಶ್ ಕುಮಾರ್ ಅವರು ಪರಸ್ಪರ ಒಂದಾಗುವುದು ಒಳಿತು ಎಂದು ಅವರು ಆಭಿಪ್ರಾಯಪಟ್ಟಿದ್ದಾರೆ.
ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವುದು ನನ್ನ ದೊಡ್ಡ ಫ್ಯಾಂಟಸಿಯಾಗಿದ್ದು, ಇದು ಸಾಧ್ಯವಾಗಿದ್ದೇ ಆದರೆ ಇದೊಂದು ಸ್ನೇಹದ ಬೆಸುಗೆಯಾಗುತದೆ. ನನ್ನ ಅಭಿಪ್ರಾಯದಂತೆ ಕಾಂಗ್ರೆಸ್ ಪಕ್ಷಕ್ಕೆ ಪ್ರಭಾವಿ ನಾಯಕನಿಲ್ಲ. ಅಂತೆಯೇ ನಿತೀಶ್ ಕುಮಾರ್ ಅವರಿಗೆ ಪ್ರಭಾವಿ ಪಕ್ಷವಿಲ್ಲ. ಹೀಗಾಗಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಪಕ್ಷ ಒಗ್ಗೂಡಿದರೆ ಬಲಿಷ್ಠ ವ್ಯವಸ್ಥೆಯನ್ನು ರೂಪಿಸಬಹುದು. ನನ್ನ ಅಭಿಪ್ರಾಯದಂತೆ ನಿತೀಶ್ ಕುಮಾರ್ ತುಂಬಾ ಪ್ರಾಮಾಣಿಕ ನಾಯಕರಾಗಿದ್ದು, ಪ್ರಧಾನಿ ಮೋದಿ ಅವರಂತೆ ಅವರಿಗೆ ಕುಟುಂಬದ ಸಮಸ್ಯೆ ಇಲ್ಲ. ಅಂತೆಯೇ ಆತ್ಮ ವೈಭವೀಕರಿಸುವ ವ್ಯಕ್ತಿಯಲ್ಲ. ನಿತೀಶ್ ಕುಮಾರ್ ಗೆ ಯಾವುದೇ ರೀತಿಯ ಪಂಥೀಯ ಭಾವನೆ ಇಲ್ಲ. ಇಂತಹ ಲಕ್ಷಣಗಳಿರುವ ಪ್ರಾಮಾಣಕಿ ರಾಜಕಾರಣಿ ಸಿಗುವುದು ತುಂಬಾ ಅಪರೂಪ ಎಂದು ಹೇಳಿದ್ದಾರೆ.
ರಾಹುಲ್ ಮತ್ತು ಸೋನಿಯಾಗೆ ಯಾವುದೇ ಭವಿಷ್ಯವಿಲ್ಲ
ಇದೇ ವೇಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕುರಿತು ಮಾತನಾಡಿದ ರಾಮಚಂದ್ರ ಗುಹಾ ಅವರು, ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಯಾವುದೇ ರೀತಿಯ ಭವಿಷ್ಯವಿಲ್ಲ. 131 ಇತಿಹಾಸಗಳ ಹೊರತಾಗಿಯೂ ಕಾಂಗ್ರೆಸ್ ಪಕ್ಷ ಭಾರತೀಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ತನ್ನ ಈಗಿರುವ 44 ಲೋಕಸಭಾ ಸ್ಥಾನಗಳನ್ನು 100ಕ್ಕೇರಿಸಿಕೊಳ್ಳುವ ಕುರಿತು ಕಠಿಣ ನಿರ್ಧಾರ ತಳೆಯಬೇಕಿದೆ.
2019ರ ಲೋಕಸಭಾ ಚುನಾವಣೆಗೆ ಇನ್ನೂ 2 ವರ್ಷಗಳ ಕಾಲಾವಕಾಶವಿದ್ದು, ಈಗಲೇ ಕಾಂಗ್ರೆಸ್ ಪಕ್ಷ ತನ್ನ ನಾಯಕತ್ವವನ್ನು ಬದಲಿಸಿಕೊಂಡರೆ ಬಹುಶಃ ಈಗಿರುವ ಸ್ಥಿತಿ ಬದಲಾಗಬಹುದು. ಹಾಲಿ ಭಾರತದ ರಾಜಕೀಯ ವ್ಯವಸ್ಥೆ ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಮಾರಕವಾಗಬಹುದು. ಒಂದು ಪಕ್ಷದ ಅಧಿಪತ್ಯ ಭಾರತದ ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂದಿದ್ದರೂ ಮಾರಕವೇ ಎಂದು ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದಾರೆ.
Advertisement