ರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆಲುವಿನ ಸಾಧ್ಯತೆ ಹೆಚ್ಚು!

ನೂತನ ರಾಷ್ಟ್ರಪತಿಗಳ ಆಯ್ಕೆಗಾಗಿ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸೋಲು-ಗೆಲುವಿನ ಲೆಕ್ಕಾಚಾರ ಕೂಡ ಶುರುವಾಗಿದೆ. ತಜ್ಞರ ಅಭಿಪ್ರಾಯದಂತೆ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ನೂತನ ರಾಷ್ಟ್ರಪತಿಗಳ ಆಯ್ಕೆಗಾಗಿ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸೋಲು-ಗೆಲುವಿನ ಲೆಕ್ಕಾಚಾರ ಕೂಡ ಶುರುವಾಗಿದೆ. ತಜ್ಞರ ಅಭಿಪ್ರಾಯದಂತೆ ಎನ್ ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್  ಅವರ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,851 ಸಂಸದರು ಮತ್ತು ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಎನ್​ಡಿಎ ಅಭ್ಯರ್ಥಿ ರಾಮನಾಥ ಕೋವಿಂದ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ನಡುವೆ ಸ್ಪರ್ಧೆ  ಏರ್ಪಟ್ಟಿದೆ. ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೊಷಿಸುವುದಕ್ಕೂ ಮೊದಲು ಎನ್​ಡಿಎ ಒಟ್ಟು ಮತ ಪ್ರಮಾಣ ಶೇ.48.10 ಆಗಿತ್ತು. ಕೋವಿಂದ್ ಅವರ ಹೆಸರು ಘೊಷಣೆಯಾಗುತ್ತಿದ್ದಂತೆ ಕೆಲ ಪಕ್ಷಗಳು  ಬೆಂಬಲ ಘೊಷಿಸಿದವು. ಟಿಆರ್ ಎಸ್, ಎಐಎಡಿಎಂಕೆ, ವೈಎಸ್ ಆರ್ ಕಾಂಗ್ರೆಸ್, ಜೆಡಿಯು ಹಾಗೂ ಬಿಜೆಡಿ ಪಕ್ಷಗಳು ಕೋವಿಂದ್ ಅವರಿಗೆ ತಮ್ಮ ಬೆಂಬಲ ಸೂಚಿಸಿವೆ, ಅದರೊಂದಿಗೆ ಎನ್ ಡಿಎ ಮೈತ್ರಿಕೂಟದ ಒಟ್ಟು ಬಲಾಬಲ  ಶೇ.61.89 ಆಗಿದೆ.

ಕುಂದಿದ ಪ್ರತಿಪಕ್ಷಗಳ ಬಲ
ಎನ್​ಡಿಎ ರಾಮನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೊಷಣೆ ಮಾಡುವ ಮೊದಲೇ ಎಲ್ಲ ಪ್ರತಿಪಕ್ಷಗಳು ಒಂದಾಗಿದ್ದರೆ ಅವರ ಒಟ್ಟು ಮತ 5,68,148 ಆಗಿರುತ್ತಿತ್ತು. ಅಂದರೆ ಶೇ.51.90 ಮತಗಳಿರುತ್ತಿದ್ದವು. ಆದರೆ  ಯುಪಿಎ ಮೀರಾ ಕುಮಾರ್ ಅವರನ್ನು ಅಭ್ಯರ್ಥಿ ಎಂದು ಘೊಷಣೆ ಮಾಡಿದ ಬಳಿಕ ಬಿಎಸ್​ಪಿ ಯುಪಿಎಗೆ ಬೆಂಬಲಿಸಿದೆ. ಸಮಾಜವಾದಿ ಪಕ್ಷದಲ್ಲಿ ಇಬ್ಬಂದಿ ನಿಲುವಿದೆ. ಮುಲಾಯಂ-ಶಿವಪಾಲ್ ಕೋವಿಂದ ಪರವಿದ್ದರೆ, ಅಖಿಲೇಶ್  ಮೀರಾ ಕುಮಾರ್​ ರನ್ನು ಬೆಂಬಲಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷ ಮೀರಾ ಕುಮಾರ್​ರನ್ನು ಬೆಂಬಲಿಸುವ ಸಾಧ್ಯತೆಯಿದೆ.

ಹೀಗಾಗಿ ಇಂದಿನ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದ್ದು, ಒಂದು ವೇಳೆ  ಕೋವಿಂದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೇ ಆದಲ್ಲಿ ದೇಶಕ್ಕೆ ಒಂಭತ್ತು ಪ್ರಧಾನಮಂತ್ರಿಗಳನ್ನು ನೀಡಿದ ಉತ್ತರಪ್ರದೇಶದಿಂದ ಮೊದಲ ಬಾರಿ ರಾಷ್ಟ್ರಪತಿಯೊಬ್ಬರ ಆಯ್ಕೆಯಾದಂತಾಗಲಿದೆ.

ಅದೇ ಮೀರಾ ಕುಮಾರ್ ಆಯ್ಕೆಯಾದಲ್ಲಿ ಪ್ರತಿಭಾ ಪಾಟೀಲ್ ಬಳಿಕ ರಾಷ್ಟ್ರಪತಿಯಾಗಿ ಆಯ್ಕೆಯಾದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇವರಿಬ್ಬರಲ್ಲಿ ಯಾರೇ ಜಯಗಳಿಸಿದರೂ ಕೆ. ಆರ್. ನಾರಾಯಣನ್  ಬಳಿಕ ರಾಷ್ಟ್ರಪತಿಯಾದ ದಲಿತ ನಾಯಕ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ.

ಗೆಲುವಿಗೆ ಎಷ್ಟು ಮತಗಳು ಅಗತ್ಯ?

ಅಭ್ಯರ್ಥಿಯು ರಾಷ್ಟ್ರಪತಿಯಾಗಿ ಆಯ್ಕೆಯಾಗಬೇಕೆಂದರೆ ಎಲ್ಲ ಸಂಸದರು ಮತ್ತು ಶಾಸಕರ ಒಟ್ಟು ಮತದ ಮೌಲ್ಯದ ಶೇ.50ಕ್ಕಿಂತ ಒಂದು ಮತ ಹೆಚ್ಚಾಗಿ ಪಡೆದಿರಬೇಕಾಗಿರುತ್ತದೆ.

ಕೋವಿಂದ ರಾಷ್ಟ್ರಪತಿಯಾದರೆ ಲಾಭವೇನು?
ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿದೆ. 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಎನ್​ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗಲಿದೆ.ಭೂಸ್ವಾದೀನ ಮಸೂದೆ ಮತ್ತೆ ಜಾರಿಗೆ ತರುವ ಸಾಧ್ಯತೆಯಿದೆ. ಮೂರು ಬಾರಿ ಸುಗ್ರೀವಾಜ್ಞೆ ಜಾರಿಗೊಳಿಸಿದ ಹೊರತಾಗಿಯೂ ಇದನ್ನು ಕೈಬಿಡಬೇಕಾಯಿತು ಎಂಬುದು ಗಮನಾರ್ಹ. ಲೋಕಸಭೆ ಮತ್ತು ವಿಧಾನಸಭೆ  ಚುನಾವಣೆಯನ್ನು ಜತೆಯಲ್ಲಿಯೇ ಮಾಡುವುದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಬೇಗನೆ ತೆಗೆದುಕೊಳ್ಳಬಹುದು. ಚುನಾವಣೆಗಳಲ್ಲಿ ರಾಜ್ಯದ ಫಂಡಿಂಗ್ ಬಗ್ಗೆ ಸಾಕಷ್ಟು ವಿವಾದಗಳಿವೆ. ಇದರ ಪರಿಹಾರಕ್ಕಾಗಿ ಹೊಸ ಕಾನೂನು  ಜಾರಿಗೆ ತರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com