ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್ ಡಿಎ ಮೈಲುಗೈ; ನಾಯ್ಡು ಗೆಲುವು ಬಹುತೇಕ ಖಚಿತ: ತಜ್ಞರು

ರಾಷ್ಟ್ರಪತಿ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಉಪರಾಷ್ಟ್ರಪತಿ ಚುನವಾಣೆಯತ್ತ ಎಲ್ಲ ರಾಜಕೀಯ ಪಕ್ಷಗಳ ಗಮನ ನೆಟ್ಟಿದ್ದು, ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ಎನ್ ಡಿಎ ತನ್ನ ಉಪರಾಷ್ಟ್ರತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರಪತಿ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಉಪರಾಷ್ಟ್ರಪತಿ ಚುನವಾಣೆಯತ್ತ ಎಲ್ಲ ರಾಜಕೀಯ ಪಕ್ಷಗಳ ಗಮನ ನೆಟ್ಟಿದ್ದು, ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ಎನ್ ಡಿಎ ತನ್ನ ಉಪರಾಷ್ಟ್ರತಿ ಅಭ್ಯರ್ಥಿಯಾಗಿ  ಘೋಷಣೆ ಮಾಡಿದ ಬೆನ್ನಲ್ಲೇ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

ಇನ್ನು ಉಪರಾಷ್ಟ್ರಪತಿ ಹುದ್ದೆಯ ಎನ್ ಡಿಎ ಅಭ್ಯರ್ಥಿಯಾಗಿರುವ ಎಂ.ವೆಂಕಯ್ಯನಾಯ್ಡು ಅವರ ಗೆಲುವಿನ ಹಾದಿ ಬಹುತೇಕ ಸುಲಭವಾಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಚು ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಎನ್ ಡಿಎ  ಗೆಲುವು ಸಾಧಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ಸದನಗಳ ಒಟ್ಟು 787 ಮತಗಳ ಪೈಕಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 557 ಸದಸ್ಯ ಬಲ ಹೊಂದಿದ್ದು, ನಿರಾಯಾಸವಾಗಿ ತನ್ನ ಅಭ್ಯರ್ಥಿ  ವೆಂಕಯ್ಯ ನಾಯ್ಡು ಅವರನ್ನು ಗೆಲ್ಲಿಸಿಕೊಳ್ಳಲಿದೆ ಎಂದು ಅಭಿಪ್ರಾಯಪಡಲಾಗಿದೆ.

ಎರಡೂ ಸದನಗಳ ಒಟ್ಟು 787 ಸದಸ್ಯರ ಸಮೂಹ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲಿದ್ದು, ಲೋಕಸಭೆಯ 542 ಸಂಸದರು ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರು ಹಾಗೂ ರಾಜ್ಯಸಭೆಯ 231 ಸದಸ್ಯರು ಹಾಗೂ 12  ನಾಮನಿರ್ದೇಶಿತ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ಇದೇ ಆಗಸ್ಟ್ 5ರಂದು ಉಪರಾಷ್ಟ್ರತಿ ಹುದ್ದೆಗೆ ಮತದಾನ ನಡೆಯಲಿದ್ದು, ಜುಲೈ 18ರಂದು ಅಂದರೆ ಇಂದೇ ವೆಂಕಯ್ಯ ನಾಯ್ಡು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಹೀಗಾಗಿ ವಿರೋಧ ಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಹಾಗೂ ವೆಂಕಯ್ಯ ನಾಯ್ಡು ನಡುವೆ ಸ್ಪರ್ಧೆ ಏರ್ಪಟ್ಟಿದೆ. ಉತ್ತಮ ಸಂಸದೀಯ ಪಟುವಾದ ವೆಂಕಯ್ಯನಾಯ್ಡು, ಸಂವಿಧಾನವನ್ನು ಅಧ್ಯಯನ ಮಾಡಿ ಅಪಾರ ಜ್ಞಾನ  ಹೊಂದಿದ್ದಾರೆ. ಉಪ ರಾಷ್ಟ್ರಪತಿಯೇ ರಾಜ್ಯಸಭೆಯ ಸಭಾಪತಿಯಾಗಿದ್ದು, ಮೇಲ್ಮನೆಯಲ್ಲಿ ಆಡಳಿತರೂಢ ಎನ್​ಡಿಎ ಮೈತ್ರಿ ಕೂಟಕ್ಕೆ ಬಹುಮತ ಇಲ್ಲದೆ ಇರುವುದರಿಂದ ಸುಗಮ ಕಲಾಪ ಮತ್ತು ತುರ್ತು ಸಂದರ್ಭದಲ್ಲಿ ಕೇಂದ್ರ  ಸರ್ಕಾರದ ನೆರವಿಗೆ ಧಾವಿಸಬೇಕು ಎನ್ನುವ ನಿಟ್ಟಿನಲ್ಲಿ ವೆಂಕಯ್ಯ ನಾಯ್ಡು ಸಮರ್ಥ ಎಂದು ಭಾವಿಸಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com