'ನಾನೀಗ ಸ್ವತಂತ್ರ ಪಕ್ಷಿ': ಕಾಂಗ್ರೆಸ್ ತೊರೆದ ಶಂಕರ್ ಸಿಂಗ್ ವಘೇಲಾ ಹೇಳಿಕೆ

ಮಾಜಿ ಗುಜರಾತ್ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರು ತಾವು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಘೋಷಿಸಿದ್ದಾರೆ.
ಶಂಕರ್ ಸಿಂಗ್ ವಘೇಲಾ
ಶಂಕರ್ ಸಿಂಗ್ ವಘೇಲಾ
ನವದೆಹಲಿ: ಮಾಜಿ ಗುಜರಾತ್ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರು ತಾವು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಘೋಷಿಸಿದ್ದಾರೆ. 
ನಾನು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ. ರಾಜ್ಯಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಎಂಎಲ್ಎ ಸ್ಥಾನಕ್ಕೂ ರಾಜಿನಾಮೆ ನೀಡುತ್ತೇನೆ. ನಾನು ಯಾವುದೇ ಪಕ್ಷದಲ್ಲಿ ಬಂಧಿತ ಕಾರ್ಮಿಕನಾಗಿ ಉಳಿಯುವುದಿಲ್ಲ. ನಾನೀಗ ಸ್ವತಂತ್ರ ಪಕ್ಷಿ ಎಂದು ತಮ್ಮ 77ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ವಘೇಲಾ ಹೇಳಿದ್ದಾರೆ. 
ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಡವಿದ್ದಾರೆ ಎಂದು ಆರೋಪಿ ಕಾಂಗ್ರೆಸ್ ವಘೇಲಾರನ್ನು ಪಕ್ಷದಿಂದ ಕಿತ್ತುಹಾಕಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗಾಂಧಿನಗರದಲ್ಲಿ ಮಾತನಾಡಿದ ವಘೇಲಾ, ಕಾಂಗ್ರೆಸ್ ಪಕ್ಷ ನನ್ನನ್ನು ಉಚ್ಛಾಟಿಸುವುದು ಬೇಡ. ನಾನೇ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. 
ನನ್ನ ಬೆಂಬಲಿಗರು ಇನ್ಮುಂದೆ ಸ್ವತಂತ್ರರಾಗಿರಬಹುದು. ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ನಾನು ಬಿಜೆಪಿಯನ್ನು ಸೇರುವುದಿಲ್ಲ ಮತ್ತೊಂದು ಪಕ್ಷವನ್ನು ಕಟ್ಟುವುದಿಲ್ಲ ಎಂದು ಹಿರಿಯ ಮುಖಂಡ ಶಂಕರ್ ಸಿಂಗ್ ವಘೇಲಾ ಹೇಳಿದ್ದಾರೆ.
ಇನ್ನು ವಘೇಲಾರನ್ನು ಪಕ್ಷದಿಂದ ಉಚ್ಛಾಟಿಸಿದ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾವು ವಘೇಲಾರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com