
ನವದೆಹಲಿ: ಲೋಕಸಭೆಯಲ್ಲಿ ಸ್ಪೀಕರ್ ಮೇಲೆ ಕಾಗದ ಪತ್ರಗಳನ್ನು ತೂರಿದ ಆರೋಪದ ಮೇರೆಗೆ ವಿಪಕ್ಷ ಕಾಂಗ್ರೆಸ್ ನ 6 ಮಂದಿ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರ ಐದು ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ.
ಕಾಂಗ್ರೆಸ್ ನ ಸದಸ್ಯರಾದ ಗೌರವ ಗೊಗೊಯಿ, ಕೆ. ಸುರೇಶ್, ಅಧೀರ್ ರಾಜನ್ ಚೌಧರಿ, ರಂಜಿತ್ ರಂಜನ್, ಸುಷ್ಮಿತಾ ದೇವಿ ಮತ್ತು ಎಂಕೆ ರಾಘವನ್ ಅವರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಮಾನತು ಮಾಡಿದ್ದಾರೆ.
ಗೋರಕ್ಷಣೆ ಹೆಸರಲ್ಲಿ ದೇಶಾದ್ಯಂತ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ಶೇಮ್ ಶೇಮ್ ಎಂದು ಘೋಷಣೆಗಳನ್ನು ಕೂಗುತ್ತ, ಸ್ಪೀಕರ್ ಅವರ ಕುರ್ಚಿ ಬಳಿ ಮುಖ್ಯವಾದ ಕಾಗದ ಪತ್ರಗಳನ್ನು ತೂರಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸದರನ್ನು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ಸಮಾಧಾನವಾಗದ ಸಂಸದರು ಸ್ಪೀಕರ್ ಅವರ ಕಾರ್ಯದರ್ಶಿಗಳ ಬಳಿ ಇದ್ದ ಕಾಗದಗಳನ್ನೂ ಕೂಡ ಕಿತ್ತು ಎಸೆದರು.
ಹೀಗಾಗಿ ಸದನವನ್ನು 2 ಗಂಟೆಗೆ ಮುಂದೂಡಿದ ಸ್ಪೀಕರ್ ಅವರು 2 ಗಂಟೆಗೆ ಸದನ ಆರಂಭವಾಗುತ್ತಿದ್ದಂತಿಯೇ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಆರು ಮಂದಿ ಸಂಸದರನ್ನು ಐದು ದಿನಗಳ ಕಲಾಪದಿಂದ ಅಮಾನತು ಮಾಡಿದರು.
Advertisement