ಮಗನ ವಿರುದ್ಧ ಭ್ರಷ್ಟಾಚಾರ ಆರೋಪ ನಿರಾಕರಿಸಿದ ವೆಂಕಯ್ಯ ನಾಯ್ಡು!

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪವೊಂದು ಕೇಳಿಬಂದಿದ್ದು, ಆರೋಪ ಅಲ್ಲಗಳೆದಿರುವ ವೆಂಕಯ್ಯ ನಾಯ್ಡು ಅವರು ಇದು ರಾಜಕೀಯ ದುರುದ್ದೇಶದ ಆರೋಪ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪವೊಂದು ಕೇಳಿಬಂದಿದ್ದು, ಆರೋಪ ಅಲ್ಲಗಳೆದಿರುವ ವೆಂಕಯ್ಯ ನಾಯ್ಡು ಅವರು ಇದು ರಾಜಕೀಯ ದುರುದ್ದೇಶದ  ಆರೋಪ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ.

ಮೂಲಗಳ ಪ್ರಕಾರ ವೆಂಕಯ್ಯ ನಾಯ್ಡು ಅವರ ಮಕ್ಕಳು ತೆಲಂಗಾಣ ಹಾಗೂ ಮಧ್ಯಪ್ರದೇಶ ಸರ್ಕಾರಗಳಿಂದ ಪ್ರಯೋಜನ ಪಡೆದು, ಭೂ ಕಬಳಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ. ಕುಟುಂಬದ ಜತೆಗೆ ನಂಟು  ಹೊಂದಿರುವ ವ್ಯವಹಾರ ಮತ್ತು ಟ್ರಸ್ಟ್‌ಗಳ ವಹಿವಾಟಿಗೆ ಉತ್ತೇಜನ ನೀಡಲಾಗಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ  ಮುಖಂಡ ಜೈರಾಮ್ ರಮೇಶ್ ಅವರು, "ಸಾರ್ವಜನಿಕ ಜೀವನದಲ್ಲಿ ತಾವು ಪಾರದರ್ಶಕ, ಹೊಣೆಗಾರಿಕೆ, ಪ್ರಾಮಾಣಿಕತೆಯ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಿರುವ ನಾಯ್ಡು, ತಾವು ಸ್ವಚ್ಛ ಎನ್ನುವುದನ್ನು ಸಾಬೀತುಪಡಿಸಲಿ"  ಎಂದು ಸವಾಲು ಹಾಕಿದ್ದರು.

"ನಾಯ್ಡು ಅವರ ಪುತ್ರಿಯ ಸ್ವರ್ಣಭಾರತಿ ಟ್ರಸ್ಟ್ ಹೈದ್ರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ ಮೆಂಟ್ ಆಥಾರಿಟಿಗೆ ನೀಡಬೇಕಿದ್ದ ಎರಡು ಕೋಟಿ ರು. ಶುಲ್ಕವನ್ನು ವಿನಾಯಿತಿ ಮಾಡಿ ತೆಲಂಗಾಣ ಸರ್ಕಾರ 2017ರ ಜೂನ್  20ರಂದು ಹೊರಡಿಸಿದ ಆದೇಶವನ್ನು ರಹಸ್ಯವಾಗಿಟ್ಟಿರುವುದು ನಿಜವಲ್ಲವೇ? ಹಿಂದೆ ಯಾವ ಟ್ರಸ್ಟ್‌ಗೂ ನೀಡದ ವಿನಾಯಿತಿಯನ್ನು ಈ ಟ್ರಸ್ಟ್‌ಗೆ ನೀಡಲು, ನಾಯ್ಡು ಅವರ ಪುತ್ರಿ ಈ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿಯಾಗಿರುವುದೇ  ಕಾರಣವಾಗಿದೆ. ನಾಯ್ಡು ಅವರ ಪುತ್ರ ಮಾಲಿಕನಾಗಿರುವ ಹರ್ಷ ಟೊಯಾಟೊ ಹಾಗೂ ತೆಲಂಗಾಣ ಸಿಎಂನ ಮಗನ ಮಾಲಿಕತ್ವದ ಹಿಮಾಂಶು ಮೋಟರ್ಸ್‌ನಿಂದ 271 ಕೋಟಿ ರು. ವೆಚ್ಚದಲ್ಲಿ ಪೊಲೀಸ್ ಇಲಾಖೆಗೆ ವಾಹನಗಳನ್ನು  ಖರೀದಿ ಮಾಡಲು ತೆಲಂಗಾಣ ಸರ್ಕಾರ 2014ರಲ್ಲಿ ಆದೇಶಿಸಿರುವುದು ನಿಜವಲ್ಲವೇ?" ಎಂದು ಜೈರಾಮ್ ಪ್ರಶ್ನಿಸಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದ ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ವೆಂಕಯ್ಯ ನಾಯ್ಡು ಅವರು, ದುರುದ್ದೇಶ ಪೂರಿತ ಆರೋಪಗಳು ಇವು ಎಂದು  ಹೇಳಿದ್ದಾರೆ.

ಮುಂಬರುವ ಆಗಸ್ಟ್ 5ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ನಾಯ್ಡು ಈಗಾಗಲೇ ಪಕ್ಷದ ಜವಾಬ್ದಾರಿ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯುಪಿಎ  ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರ ವಿರುದ್ಧ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com