ಖಾಸಗಿತನ ಮೂಲಭೂತ ಹಕ್ಕಾಗಿ ಘೋಷಿಸುವಂತೆ ಕರ್ನಾಟಕ, ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಪುದುಚೇರಿ ರಾಜ್ಯಗಳ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿವೆ. ತಂತ್ರಜ್ಞಾನ ಆಧುನೀಕರಣಗೊಂಡಿರುವ ಕಾಲಘಟ್ಟದಲ್ಲಿ ‘ಖಾಸಗಿ ಹಕ್ಕು’ ಕುರಿತಾಗಿ ಕೋರ್ಟ್ ಮತ್ತೊಮ್ಮೆ ಪರಾಮರ್ಶಿಸಬೇಕೆಂದು ನಾಲ್ಕು ರಾಜ್ಯಗಳು ಮನವಿ ಮಾಡಿವೆ. ಅಲ್ಲದೆ ಆಧಾರ್ ಗುರುತು ಚೀಟಿ ಮೂಲಕ ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿ ಸೇರಿದಂತೆ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಹಂಚುವುದು ಖಾಸಗಿತನದ ’ಮೂಲಭೂತ’ ಹಕ್ಕು ಉಲ್ಲಂಘಿಸಿದಂತೆ ಆಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.