ಚೆನ್ನೈ: ರೈಲು ನಿಲ್ದಾಣದಲ್ಲಿ ಕಾಲುವೆಗೆ ಬಿದ್ದ ಬಾಲಕನಿಗೆ 6 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕೊಟ್ಟಾಪುರಂ ಎಂಆರ್ ಟಿಎಸ್ ರೈಲ್ವೆ ನಿಲ್ದಾಣದಲ್ಲಿ ಗೋಡೆ ಮತ್ತು ನೆಲದ ನಡುವೆ ಮುಚ್ಚದೆ ಇದ್ದ ಚರಂಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಕೊಟ್ಟಾಪುರಂ ಎಂಆರ್ ಟಿಎಸ್ ರೈಲ್ವೆ ನಿಲ್ದಾಣದಲ್ಲಿ ಗೋಡೆ ಮತ್ತು ನೆಲದ ನಡುವೆ ಮುಚ್ಚದೆ ಇದ್ದ ಚರಂಡಿ ಕಾಲುವೆಗೆ ಮೂರೂವರೆ ವರ್ಷದ ಬಾಲಕ ಬಿದ್ದು 6 ವರ್ಷಗಳು ಕಳೆದ ನಂತರ, ದಕ್ಷಣ ರೈಲ್ವೆಗೆ ಆದೇಶ ನೀಡಿದ ಮದ್ರಾಸ್ ಹೈಕೋರ್ಟ್ ಬಾಲಕನ ವೈದ್ಯಕೀಯ ವೆಚ್ಚವಾಗಿ 6.1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೇಳಿದೆ.
ಚರಂಡಿಯ 20 ಅಡಿ ಆಳಕ್ಕೆ ಎಸ್.ಶ್ರೀನಿವಾಸನ್ ಅವರ ಮಗ ಬಿದ್ದಿದ್ದನು. ನಂತರ ಅವನನ್ನು ರಕ್ಷಿಸಲಾಯಿತು. ಈ ಸಂದರ್ಭದಲ್ಲಿ ಮಗುವಿನ ಇಡೀ ದೇಹ ಕೊಳಚೆ ನೀರಿನಲ್ಲಿ ಮುಳುಗಿ ಹೋಗಿತ್ತು. ಆತನ ಮುಖ, ಮೂಗು, ಬಾಯಿ ಮತ್ತು ದೇಹದ ಎಲ್ಲಾ ಭಾಗಗಳಿಗೆ ಕೊಳಕು ನೀರು ಮತ್ತು ಕಸ ಮೆತ್ತಿಕೊಂಡಿತ್ತು. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ತಮ್ಮ ಮಗನ ವೈದ್ಯಕೀಯ ವೆಚ್ಚವಾಗಿ 2.1 ಲಕ್ಷ ರೂಪಾಯಿ ಖರ್ಚಾಗಿತ್ತು.
2011ರಲ್ಲಿ ಈ ಬಗ್ಗೆ ಮದ್ರಾಸ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಶ್ರೀನಿವಾಸನ್, 15 ಲಕ್ಷ ರೂಪಾಯಿ ಪರಿಹಾರ ಕೊಡಿಸುವಂತೆ ಒತ್ತಾಯಿಸಿದ್ದರು.
ಇತ್ತೀಚೆಗೆ ಆದೇಶ ನೀಡಿದ ನ್ಯಾಯಮೂರ್ತಿ ಎಸ್. ವೈದ್ಯನಾಥನ್, ಇದು ಸಂಪೂರ್ಣವಾಗಿ ರೈಲ್ವೆ ಇಲಾಖೆಯ ಬೇಜವಾಬ್ದಾರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಪೋಷಕರ ಬೇಜವಾಬ್ದಾರಿ ಕೂಡ ಸ್ವಲ್ಪ ಮಟ್ಟಿಗೆ ಇದೆ. ಮಕ್ಕಳು ಚಿಕ್ಕವರಿರುವಾಗ ಅವರನ್ನು ಜಾಗ್ರತೆಯಿಂದ ನೋಡಿಕೊಳ್ಳುವುದು ತಂದೆ-ತಾಯಿಯರ ಜವಾಬ್ದಾರಿ ಕೂಡ ಹೌದು ಎಂದು ಹೇಳಿದರು.
ಹಾಗೆಂದು ಶ್ರೀನಿವಾಸನ್ ಅವರ ಅರ್ಜಿಯನ್ನು ತಳ್ಳಿ ಹಾಕುವಂತಿಲ್ಲ. ರೈಲ್ವೆ ನಿಲ್ದಾಣದ ಕಟ್ಟಡ ಮತ್ತು ಕಾಲುವೆಯ ಗೋಡೆಯ ಮಧ್ಯೆ ಅಂತರವಿದೆ. ಹೀಗಾಗಿ ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಸೇರಿ 6.1 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದರು. ಆದರೆ ಮಧ್ಯಂತರ ಆದೇಶವಾಗಿ ದಕ್ಷಿಣ ರೈಲ್ವೆ ಶ್ರೀನಿವಾಸನ್ ಅವರಿಗೆ 1  ಲಕ್ಷ ರೂಪಾಯಿ ನೀಡಿದೆ. ಉಳಿದ ವೈದ್ಯಕೀಯ ವೆಚ್ಚ 1.1 ಲಕ್ಷ ಒಟ್ಟು ಸೇರಿಸಿ 6.1 ಲಕ್ಷ ನೀಡಲು ಹೇಳಿದೆ.
ಶ್ರೀನಿವಾಸನ್ ಅವರ ಪುತ್ರ ಅಪ್ರಾಪ್ತನಾಗಿರುವುದರಿಂದ, ಪ್ರತಿ ವರ್ಷಕ್ಕೆ ಶೇಕಡಾ 6ರಂತೆ ಬಡ್ಡಿ ಸಮೇತ 3.5 ಲಕ್ಷ ರೂಪಾಯಿಗಳನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಯೋಜನೆಯಲ್ಲಿ ಇಡುವಂತೆ ದಕ್ಷಿಣ ರೈಲ್ವೆಗೆ ಆದೇಶ ನೀಡಲಾಗಿದೆ. ಉಳಿದ 2.6 ಲಕ್ಷ ರೂಪಾಯಿಗಳನ್ನು ವರ್ಷಕ್ಕೆ ಶೇಕಡಾ 6ರಂತೆ ಬಡ್ಡಿ ಸಮೇತ ನೀಡಲು ಕೋರ್ಟ್ ದಕ್ಷಿಣ ರೈಲ್ವೆಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com