ಆಕಾಶ್-3 ಕ್ಷಿಪಣಿ ಪರೀಕ್ಷೆಯಲ್ಲಿ ವಿಫಲ: 3,600 ಕೋಟಿ ರು. ವ್ಯರ್ಥ ಎಂದ ಸಿಎಜಿ ವರದಿ

ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಇನ್ನೂ ಸಂಶೋಧನಾ ಹಂತದಲ್ಲಿರುವ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸುವ ಸೇನೆಯ ನಿರ್ಧಾರಕ್ಕೆ ಭಾರತದ ಮಹಾಲೇಖಪಾಲರು (ಸಿಎಜಿ) ಅಸಮಾಧಾನ ವ್ಯಕ್ತಪಡಿಸಿದ್ದು, 3,600 ಕೋಟಿ. ರು ಗಳ ಮಹತ್ವದ ಯೋಜನೆ ವ್ಯರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಇನ್ನೂ ಸಂಶೋಧನಾ ಹಂತದಲ್ಲಿರುವ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸುವ ಸೇನೆಯ ನಿರ್ಧಾರಕ್ಕೆ ಭಾರತದ ಮಹಾಲೇಖಪಾಲರು (ಸಿಎಜಿ)  ಅಸಮಾಧಾನ ವ್ಯಕ್ತಪಡಿಸಿದ್ದು,  3,600 ಕೋಟಿ. ರು ಗಳ ಮಹತ್ವದ ಯೋಜನೆ ವ್ಯರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಸುಮಾರು 3,600 ಕೋಟಿ ರು.ಗಳನ್ನು ವ್ಯಯಿಸಿ ತಯಾರಿಸಲಾಗಿದ್ದ ಆಕಾಶ್ ಮಾದರಿಯ ಮೂರನೇ ಆವೃತ್ತಿಯ ಕ್ಷಿಪಣಿಗಳು ಪರೀಕ್ಷೆಗಳಲ್ಲಿ ವಿಫಲವಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಇದರಿಂದಾಗಿ, ಯುದ್ಧದಂಥ  ಭೀಕರ ಸಮಯದಲ್ಲಿ ಭಾರತವು ಕ್ಷಿಪಣಿಗಳ ಅಭಾವ ಎದುರಿಸಬೇಕಾಗುತ್ತದೆ ಎಂದು ಸಿಎಜಿ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಲೋಕಸಭೆಗೆ ತನ್ನ ವರದಿ ನೀಡಿರುವ ಸಿಎಜಿ ಸೇನಾ ಶಸ್ತ್ರಾಸ್ತ್ರಗಳ ಕುರಿತಂತೆ ಇತ್ತೀಚೆಗೆ ನಡೆಸಿರುವ  ಆಡಿಟಿಂಗ್ ವಿವರಗಳನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಅದರಂತೆ ಆಕಾಶ್ ಕ್ಷಿಪಣಿಯ ವೈಫಲ್ಯವನ್ನು ವರದಿಯಲ್ಲಿ ಒತ್ತಿ ಹೇಳಲಾಗಿದ್ದು,  ಆಕಾಶ್ ಕ್ಷಿಪಣಿಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ (ಬಿಇಎಲ್) ತಯಾರಿಸಿದೆ. ಏಳು ವರ್ಷಗಳ ಹಿಂದೆ, ಈ ಕ್ಷಿಪಣಿ ತಯಾರಿಕೆಗೆ ಆದೇಶ  ನೀಡಲಾಗಿತ್ತು. ಅಲ್ಲದೆ, ಈ ಕ್ಷಿಪಣಿ ತಯಾರಿಕೆಗಾಗಿ 3,600 ಕೋಟಿ ರು. ವ್ಯಯಿಸಲಾಗಿದೆ. ಆದರೂ, ಕ್ಷಿಪಣಿಯು ಪರೀಕ್ಷೆಯಲ್ಲಿ ವಿಫಲವಾಗಿರುವುದು ಆತಂಕ ಸೃಷ್ಟಿಸಿದೆ ಎಂದು ಹೇಳಲಾಗಿದೆ. ಈಗಾಗಲೇ ಆಕಾಶ್, ಆಕಾಶ್ ಎಂಕೆ -2  ಕ್ಷಿಪಣಿಗಳು ಯಶಸ್ವಿಯಾಗಿದ್ದು, ಅವುಗಳನ್ನು ಭಾರತೀಯ ಸೇನೆ ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ.

ಇದೀಗ ಮೂರನೇ ಆವೃತ್ತಿಯಲ್ಲಿ ಸುಮಾರು 6 ಕ್ಷಿಪಣಿಗಳ ತಯಾರಿಕೆಗೆ ಅನುವು ಮಾಡಲಾಗಿತ್ತು. ಆದರೆ, ಅವು ಪರೀಕ್ಷೆಯಲ್ಲಿ ವಿಫಲವಾಗಿವೆ. ಭೂಮಿಯಿಂದ ಆಗಸದ ಮೇಲಿನ ಗುರಿಗಳನ್ನು ಧ್ವಂಸ ಮಾಡಬಲ್ಲ ಆಕಾಶ್ ಕ್ಷಿಪಣಿಗಳನ್ನು  ಇಂಡೋ-ಚೀನಾ ಗಡಿಯ ಸುಮಾರು 5 ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲು ಸೇನೆ ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆ ಸಂಶೋಧಿಸಿರುವ ಈ ಕ್ಷಿಪಣಿ ಪರಿಪೂರ್ಣವಾಗಿ ಬಳಕೆಗೆ  ಯೋಗ್ಯವಾಗಿಲ್ಲ. ಸತತ ಪರೀಕ್ಷೆಗಳ ಹೊರತಾಗಿಯೂ ಕ್ಷಿಪಣಿ ಇನ್ನೂ ಶೇ.30 ರಷ್ಟು ವೈಫಲ್ಯ ಎದುರಿಸುತ್ತಿದೆ. ಹೀಗಿರುವಾಗ ಉದ್ವಿಗ್ನವಾಗಿರುವ ಭಾರತ-ಚೀನಾ ಗಡಿಯಲ್ಲಿ ಕ್ಷಿಪಣಿ ನಿಯೋಜನೆ ಮಾಡುತ್ತಿರುವುದೇಕೆ ಎಂದು ಸಿಎಜಿ  ತನ್ನ ವರದಿಯಲ್ಲಿ ಪ್ರಶ್ನಿಸಿದೆ.

ಒಂದು ವೇಳೆ ಗಡಿಯಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಉದ್ಭವವಾಗಿ ಇವುಗಳ ಬಳಕೆ ಅನಿವಾರ್ಯವೆಂದು ಶತೃಪಾಳಯದ ಮೇಲೆ ಪ್ರಯೋಗಿಸಿದಾಗ ಅದು ವಿಫಲವಾದರೆ ಮುಂದಿನ ಗತಿ ಏನು? ಎಂಬ ಗಂಭೀರ ಪ್ರಶ್ನೆಯನ್ನು  ಸಿಎಜಿ ಎತ್ತಿದೆ. ಈ ಬಗ್ಗೆ ಲೋಕಸಭೆಗೆ ಇಂದು ಸಿಎಜಿ ತನ್ನ ವರದಿ ನೀಡಲಿದ್ದು, ಆಕಾಶ್ ಕ್ಷಿಪಣಿಗಳ ಗುಣಮಟ್ಟದ ಕೊರತೆ ಹೊರತಾಗಿಯೂ ಕ್ಷಿಪಣಿಗಳನ್ನು ನಿಯೋಜಿಸಲು ಮುಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಯೋಜನೆಯಂತೆ 2013ರಿಂದ 2015ರವರೆಗಿನ ಅವಧಿಯಲ್ಲಿ ಚೀನಾ-ಭಾರತ ಗಡಿಯ ಒಟ್ಟು ಪ್ರದೇಶಗಳಲ್ಲಿ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಬೇಕಿತ್ತು. ಈ ಯೋಜನೆಗೆ ಸುಮಾರು 3,619 ಕೋಟಿ ವ್ಯಯಿಸಲಾಗಿದ್ದು, ಈ ವರೆಗೂ  ಒಂದೇ ಒಂದು ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿಲ್ಲ. ತಾಂತ್ರಿಕ ದೋಷ ಹಾಗೂ ಪ್ರಾಥಮಿಕ ಹಂತದ ತಾಂತ್ರಿಕ ಕಾರ್ಯಗಳ ತೊಂದರೆಯಿಂದಾಗಿ ಕ್ಷಿಪಣಿಗಳನ್ನು ಅಳವಡಿಸಲಾಗಿಲ್ಲ ಎಂದು ಹೇಳಿದೆ.

ವರದಿಯಲ್ಲಿ ಆಕಾಶ್ ಕ್ಷಿಪಣಿಗಳ ಹೆಸರನ್ನು ನೇರವಾಗಿ ನಮೂದಿಸಿಲ್ಲವಾದರೂ ಆಕಾಶ್ ಕ್ಷಿಪಣಿ ಯೋಜನೆಗೆ ಸಂಬಂಧಿಸಿದ ಕುರಿತು ಅಂಕಿ ಅಂಶಗಳನ್ನೇ ಮುಂದಿಟ್ಟುಕೊಂಡು  ಸಿಎಜಿ ಪ್ರಶ್ನಿಸಿದೆ ಎಂದು ತಿಳಿದುಬಂದಿದೆ. 2014ರ  ನವೆಂಬರ್ ವರೆಗೂ ಸುಮಾರು 80 ಕ್ಷಿಪಣಿಗಳನ್ನು ಪೂರೈಕೆ ಮಾಡಲಾಗಿದ್ದು, ಈ ಪೈಕಿ 20 ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು, ಅದರಂತೆ ಇವುಗಳಲ್ಲಿ 6 ಕ್ಷಿಪಣಿಗಳಲ್ಲಿ ಶೇ.30ರಷು ವೈಫಲ್ಯ ಕಂಡುಬಂದಿತ್ತು. ಶೇ.30ರಷ್ಟು  ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷಿಪಣಿ ಶೇ.100ರಷ್ಟು ಯಶಸ್ಸು ಸಾಧಿಸುವಂತೆ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಎಂದು ಸಿಎಜಿ ತನ್ನ ವರಿದಿಯಲ್ಲಿ  ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com