ಛೋಪ್ರಾ: ಅಡುಗೆ ಅನಿಲದ ಮೇಲಿನ ಎಲ್ಲಾ ಸಬ್ಸಿಡಿಯನ್ನು ತೆಗೆದು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಟುವಾಗಿ ಟೀಕಿಸಿದ್ದು, ಜನತೆಗೆ ಹಣಕಾಸಿನ ನೆರವು ಒದಗಿಸುವುದು ಸರ್ಕಾರದ ಸಾಮಾಜಿಕ ಬಾಧ್ಯತೆಯಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ಇಂದು ಛೋಪ್ರಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ, ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಬಡವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಸಬ್ಸಿಡಿ ನಿಲ್ಲಿಸುವ ನಿರ್ಧಾರದಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ ಎಂದಿದ್ದಾರೆ.
ಸಬ್ಸಿಡಿ ಒದಗಿಸುವುದು ಸರ್ಕಾರದ ಸಾಮಾಜಿಕ ಬಾಧ್ಯತೆ ಮತ್ತು ಮಾನವೀಯ ಕರ್ತವ್ಯವಾಗಿದೆ. ಸಬ್ಸಿಡಿಯನ್ನು ಯಾರೋ ಒಬ್ಬರು ತಮ್ಮ ವೈಯಕ್ತಿಕ ಫಂಡ್ ನಿಂದ ಕೊಡುವುದಿಲ್ಲ. ಅದು ಜನರ ಪಾಕೇಟ್ ನಿಂದ ಬಂದ ಹಣ ಎಂದು ಮಮತಾ ಹೇಳಿದ್ದಾರೆ.
ನಿನ್ನೆಯಷ್ಟೆ ಕೇಂದ್ರ ಸರ್ಕಾರ ಮುಂದಿನ ವರ್ಷ ಮಾರ್ಚ್ ನಂತರ ಎಲ್ ಪಿಜಿ ಸಬ್ಸಿಡಿ ತೆಗೆದು ಹಾಕುವುದಕ್ಕಾಗಿ ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳು 4 ರುಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆದೇಶಿಸಿದೆ.