ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಐವರು ಭಾರತೀಯ ಯೋಧರ ಹತ್ಯೆ ಮಾಡಿದ್ದೇವೆಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತೀಯ ಸೇನೆ ಭಾನುವಾರ ತಿರಸ್ಕರಿಸಿದೆ.
ಗಡಿ ನಿಯಂತ್ರಣ ರೇಖೆ(ಎಲ್ ಒಸಿ)ಯ ತಟ್ಟ ಪಾನಿ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಭಾರತೀಯ ಸೇನೆಯ ವಿರುದ್ಧ ಪ್ರತಿದಾಳಿ ನಡೆಸುವ ಮೂಲಕ ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆಂದು ನಿನ್ನೆಯಷ್ಟೇ ಪಾಕಿಸ್ತಾನ ಹೇಳಿಕೊಂಡಿತ್ತು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಿದೆ. ಗಡಿಯಲ್ಲಿ ನಡೆದ ಕದನ ವಿರಾಮ ಉಲ್ಲಂಘನೆ ವೇಳೆ ಯಾವ ಯೋಧರನ್ನು ಕಳೆದುಕೊಂಡಿಲ್ಲ ಎಂದು ಹಿರಿಯ ಸೇನಾಧಿಕಾರಿ ಹೇಳಿದ್ದಾರೆ.
ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆಂದು ಹೇಳುತ್ತಿರುವುದು ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಬಂಕರ್ ಗಳನ್ನು ನಾಶಗೊಳಿಸಿದ್ದೇವೆಂಬ ಪಾಕಿಸ್ತಾನದ ಹೇಳಿಕೆಗಳೆಲ್ಲ ಶುದ್ಧ ಸುಳ್ಳು ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡು, ಮಾರ್ಟರ್ ಬಾಂಬ್ ಮತ್ತು ಶೆಲ್ ಗಳಿಂದ ದಾಳಿ ನಡೆಸುತ್ತಿದೆ. ಮಾರ್ಟರ್ ಶೆಲ್ ದಾಳಿಯಿಂದಾಗಿ ಪೂಂಚ್ ಸೆಕ್ಟರ್ ಬಳಿ ಮಹಿಳೆಯೊಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಎಂದು ಪೊಲೀಸರು ಹೇಳಿದ್ದಾರೆ.