
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಇರುವ ಸುಮಾರು 32 ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ನಿಷೇಧಿಸಿದ್ದು, ವಿದ್ಯಾರ್ಥಿಗಳನ್ನುಕಾಲೇಜಿಗೆ ನೋಂದಾಯಿಸಿಕೊಳ್ಳದಂತೆ ಆದೇಶ ನೀಡಿದೆ.
ಈ ಹಿಂದೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಈ ಕಾಲೇಜುಗಳು ಕಳಪೆ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವುದು ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ದೇಶಾದ್ಯಂತ 32 ಖಾಸಗಿ ಕಾಲೇಜುಗಳ ಮೇಲೆ ಕೇಂದ್ರದ ಆರೋಗ್ಯ ಸಚಿವಾಲಯ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಮುಂದಿನ ಎರಡು ವರ್ಷಗಳವರೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳದಂತೆ ಕಾಲೇಜು ಆಡಳಿತ ಮಂಡಳಿಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಸಮಿತಿ ಸದಸ್ಯರು ಈ ಕಾಲೇಜುಗಳ ಸೌಲಭ್ಯ ಗುಣಮಟ್ಟವನ್ನು ಮಾನ್ಯ ಮಾಡಿತ್ತು. 2016ರ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್, ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎಲ್.ಲೋಧಾ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ನೇಮಕ ಮಾಡಿ, ಭ್ರಷ್ಟಾಚಾರ ಆರೋಪದ ಬಗ್ಗೆ ಪರಿಶೀಲನೆ ನಡೆಸಿ, ಗುಣಮಟ್ಟ ಸುಧಾರಣೆಗೆ ಕ್ರಮಗಳನ್ನು ಶಿಫಾರಸ್ಸು ಮಾಡುವಂತೆ ಸೂಚಿಸಿತ್ತು. ಅದರಂತೆ ಈ ಸಮಿತಿ ನೇಮಕವಾಗುವ ವೇಳೆಗೆ ಎಂಸಿಐ 109 ಹೊಸ ಕಾಲೇಜುಗಳ ತಪಾಸಣೆ ಪೂರ್ಣಗೊಳಿಸಿತ್ತು. ವಿದ್ಯಾರ್ಥಿ ಪ್ರವೇಶಕ್ಕೆ ಅನುಮತಿ ಕೋರಿದ್ದ 109 ಕಾಲೇಜುಗಳ ಪೈಕಿ 17ಕ್ಕೆ ಮಾತ್ರ ಎಂಸಿಐ ಅನುಮತಿ ನೀಡಿತ್ತು. ಬಳಿಕ ಮರುಪರಿಶೀಲನೆ ನಡೆಸಿ 34 ಕಾಲೇಜುಗಳಿಗೆ ಅನುಮತಿ ನೀಡಿತ್ತು.
ಆದರೆ ಸಮಿತಿಯ ನಿರ್ಧಾರಕ್ಕೆ ವ್ಯತಿರಿಕ್ತವಾದ ಕ್ರಮವನ್ನು ಕೇಂದ್ರ ಕೈಗೊಂಡಿದ್ದು, ಸರ್ಕಾರ ಈ ಕಾಲೇಜುಗಳು ಠೇವಣಿ ಇಟ್ಟಿರುವ ತಲಾ ಎರಡು ಕೋಟಿ ರುಪಾಯಿಗಳ ಭದ್ರತಾ ಠೇವಣಿಯನ್ನೂ ಕೂಡ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ. ಆದರೆ ಈ ಸಂಸ್ಥೆಗಳಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ 4,000 ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ.
"ಈ ಕಾಲೇಜುಗಳಲ್ಲಿ ವ್ಯಾಪಕ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ತನಿಖಾ ಸಮಿತಿ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಈಗಾಗಲೇ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ನಿರ್ಧಾರದಿಂದ ಯಾವುದೇ ಹಾನಿ ಆಗುವುದಿಲ್ಲ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಅರುಣ್ ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ.
ಹಲವು ವರ್ಷಗಳಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ನಿಗದಿತ ಗುಣಮಟ್ಟವನ್ನು ತಲುಪಲು ವಿಫಲವಾದರೂ, ವ್ಯಾಪಕ ಭ್ರಷ್ಟಾಚಾರ ಎಸಗಿ ಕಾಲೇಜುಗಳು ಮುಂದುವರಿಯುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
Advertisement