ಪಾಕ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾಶ್ಮೀರ ವಿವಾದ ಪ್ರಶ್ನಿಸಲು ಸಾಧ್ಯವಿಲ್ಲ: ಸುಷ್ಮಾ ಸ್ವರಾಜ್

ಕಾಶ್ಮೀರ ವಿವಾದವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಶ್ಮೀರ ವಿವಾದವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 3 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಭಾರತ ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಇಚ್ಛಿಸುತ್ತದೆ. ಆದರೆ  ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಇದಕ್ಕೆ ಅಡ್ಡಿಯಾಗುತ್ತಿದ್ದು, ಪಾಕಿಸ್ತಾನ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯ ಮೃದು ಧೋರಣೆ ಹೊಂದಿಲ್ಲ ಎಂದು ಹೇಳಿದರು.

ಅಂತೆಯೇ ಕಾಶ್ಮೀರ ವಿಚಾರವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಷ್ಮಾ ಸ್ವರಾಜ್ ಅವರು, ಭಯೋತ್ಪಾದನೆ ಮತ್ತು ದ್ವಿಪಕ್ಷೀಯ ಮಾತುಕತೆ ಒಟ್ಟಿಗೆ ಇರಲು  ಸಾಧ್ಯವಿಲ್ಲ ಎಂದು ಹೇಳಿದರು. ಅಂತೆಯೇ ಅಸ್ತಾನದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಹಣಕ್ಕಾಗಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿಲ್ಲ; ಡೊನಾಲ್ಡ್ ಟ್ರಂಪ್ ಗೆ ಸುಷ್ಮಾ ಸ್ವರಾಜ್ ತೀಕ್ಷ್ಣ ತಿರುಗೇಟು!
ಇದೇ ವೇಳೆ ವಿದೇಶಿ ಆರ್ಥಿಕ ನೆರವಿಗಾಗಿ ಒತ್ತಡಕ್ಕೆ ಮಣಿದು ಭಾರತ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಸಹಿ ಹಾಕಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಸುಷ್ಮಾ ಸ್ವರಾಜ್ ಅವರು, ಭಾರತ ಯಾವುದೇ ಒತ್ತಡಕ್ಕೆ ಮಣಿದು ಅಥವಾ ವಿದೇಶಿ ಆರ್ಥಿಕ ನೆರವಿನ ಆಮಿಷಕ್ಕೆ ಒಳಗಾಗಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು. "ಪ್ಯಾರಿಸ್ ಒಪ್ಪಂದದ  ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ತಾವು ನಿರಾಕರಿಸುತ್ತಿದ್ದು, ಭಾರತ ಮತ್ತು ಭಾರತೀಯರು ಪರಿಸರದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ನಮ್ಮ ಧಾರ್ಮಿಕತೆ ಮತ್ತು ಸಂಸ್ಕೃತಿ  ಪರಿಸರದೊಂದಿಗೆ ಬೆಸೆದುಕೊಂಡಿದ್ದು, ಪರಿಸರವನ್ನೂ ಕೂಡ ನಾವು ದೇವರೆಂದು ಪೂಜಿಸುತ್ತೇವೆ. ಸಾವಿರಾರು ವರ್ಷಗಳ ನಮ್ಮ ಪರಿಸರ ಪ್ರೀತಿಯಿಂದಾಗಿಯಷ್ಟೇ ನಾವು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆಯೇ ಹೊರತು  ಹಣದ ಆಮಿಷ ಅಥವಾ ಒತ್ತಡಕ್ಕೆ ಮಣಿದು ಸಹಿ ಹಾಕಿಲ್ಲ. ಅಂತೆಯೇ ಅಮೆರಿಕ ಅಗೌರವದಿಂದ ಕಂಡಿರುವ ಪ್ಯಾರಿಸ್ ಒಪ್ಪಂದವನ್ನು ನಾವು ಕಟಿಬದ್ಧವಾಗಿ ಪಾಲಿಸುತ್ತೇವೆ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com