ಮುಂಬೈ: ಐಡಿಬಿಐನಿಂದ ಕೆಎಫ್ ಎಗೆ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಮದ್ಯದ ದೊರೆ ವಿಜಯ್ ಮಲ್ಯ ಹಾಗೂ ಇತರರ ವಿರುದ್ಧ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ.
ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಂದು ವಿಶೇಷ ಕೋರ್ಟ್ ಗೆ 57 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.
ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಜಯ್ ಮಲ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದ ಇಡಿ, ಮದ್ಯದ ದೊರೆಗೆ ಸಂಬಂಧಿಸಿದ ಸುಮಾರು 9,600 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ವಿಜಯ್ ಮಲ್ಯ ಅವರು ಐಡಿಬಿಐ ಬ್ಯಾಂಕ್ ನಿಂದ ಪಡೆದ 4 ಸಾವಿರ ಕೋಟಿ ರುಪಾಯಿ ಸಾಲವನ್ನು ಕಾನೂನು ಬಾಹಿರವಾಗಿ ಹೇಗೆ ವಿದೇಶಕ್ಕೆ ವರ್ಗಾವಣೆ ಮಾಡಿದ್ದಾರೆ ಎಂಬುದರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ಹಾಗೂ ಐಡಿಬಿಐ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನು ವಿವರಿಸಲಾಗಿದೆ ಎಂದಿದ್ದಾರೆ.
ನಿನ್ನೆ 13 ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ಕೋರ್ಟ್, ಸಾಲದ ದೊರೆಗೆ ಜಾಮೀನು ನೀಡಿ, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.