ನವದೆಹಲಿ: ಇತ್ತೀಚಿಗಷ್ಟೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಾಗೂ ಹೊಸ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ಹಾಗೂ 50 ಸಾವಿರ ರುಪಾಯಿಗಿಂತ ಹೆಚ್ಚಿನ ಹಣಕಾಸು ವರ್ಗಾವಣೆಗೆ ಆಧಾರ್ ಕಡ್ಡಾಯಗೊಳಿಸಿದೆ.
ಆಧಾರ್ ಗೆ ಸಂಬಂಧಿಸಿದಂತೆ ಇಂದು ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಈಗ ಬ್ಯಾಂಕ್ ಖಾತೆ ಹೊಂದಿರುವವರು ಡಿಸೆಂಬರ್ 31, 2017ರೊಳಗೆ ತಮ್ಮ ಬ್ಯಾಂಕ್ ಗೆ ಆಧಾರ್ ಕಡ್ಡಾಯವಾಗಿ ಸಲ್ಲಿಸಬೇಕು. ಇಲ್ಲದಿದ್ದರೆ ಖಾತೆಗಳನ್ನು ಅಸಿಂಧುಗೊಳಿಸಲಾಗುವುದು ಎಂದು ಎಚ್ಚರಿಸಿದೆ.
ಈ ಮಧ್ಯೆ ಆದಾಯ ತೆರಿಗೆ ಇಲಾಖೆ ಸಹ 2 ಲಕ್ಷ ರುಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, 2 ಲಕ್ಷ ರು.ಗಿಂತ ಹೆಚ್ಚು ನಗದು ಸ್ವೀಕರಿಸುವವರಿಗೂ ಅಷ್ಟೇ ಪ್ರಮಾಣದ ದಂಡ ಹಾಕುವುದಾಗಿ ಹೇಳಿದೆ.
ಏಪ್ರಿಲ್ 1,2017ರಿಂದ ಕೇಂದ್ರ ಸರ್ಕಾರ ಎರಡು ಲಕ್ಷ ರುಪಾಯಿಗಿಂತ ಹೆಚ್ಚು ನಗದು ವರ್ಗಾವಣೆಯನ್ನು ನಿಷೇಧಿಸಿದೆ.