ವಿಮಾನ ನಿಲ್ದಾಣದಲ್ಲಿ ಗದ್ದಲ: ಟಿಡಿಪಿ ಸಂಸದ ಜೆಸಿ ದಿವಾಕರ್ ಗೆ ವಿಮಾನ ಯಾನ ಸಂಸ್ಥೆಗಳಿಂದ ನಿಷೇಧ!

ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರನ್ನು ತನ್ನ ವಿಮಾನದಲ್ಲಿ ಪ್ರಯಾಣಿಸದಂತೆ ಇಂಡಿಗೋ ವಿಮಾನ ಸಂಸ್ಥೆ ನಿಷೇಧಿಸಿದ ಬೆನ್ನಲ್ಲೇ ಸಂಸದನ ವಿಮಾನಯಾನ ಪ್ರಯಾಣಕ್ಕೆ ಹಲವು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿವೆ.
ಸಿಸಿಟಿವಿ ದೃಶ್ಯ
ಸಿಸಿಟಿವಿ ದೃಶ್ಯ

ವಿಶಾಖಪಟ್ಟಣ: ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜೊತೆ ದುರ್ವತನೆ ತೋರಿದ ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರನ್ನು ತನ್ನ ವಿಮಾನದಲ್ಲಿ ಪ್ರಯಾಣಿಸದಂತೆ ಇಂಡಿಗೋ ವಿಮಾನ ಸಂಸ್ಥೆ ನಿಷೇಧಿಸಿದ ಬೆನ್ನಲ್ಲೇ ಸಂಸದನ ವಿಮಾನಯಾನ ಪ್ರಯಾಣಕ್ಕೆ ಹಲವು ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿವೆ.

ಏರ್‌ ಇಂಡಿಯಾದ ಸಿಬ್ಬಂದಿಯೊಬ್ಬರಿಗೆ ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್‌ ಕಪಾಳ ಮೋಕ್ಷ ಮಾಡಿದ ಘಟನೆ ಹಚ್ಚಹಸಿರಿರುವಾಗಲೇ ಬಿಜೆಪಿಯ ಮಿತ್ರಪಕ್ಷವಾಗಿರುವ ಆಂಧ್ರ ಪ್ರದೇಶದ ಆಡಳಿತಾರೂಢ ತೆಲುಗುದೇಶಂ ಪಕ್ಷ (ಟಿಡಿಪಿ)ದ ಸಂಸದರೊಬ್ಬರು ವಿಜಯವಾಡ ಏರ್‌ಪೋರ್ಟ್‌ನಲ್ಲಿ ಗುರುವಾರ ಅಕ್ಷರಶಃ ಗೂಂಡಾ ವರ್ತನೆ ತೋರಿ ವಿಮಾನಯಾನ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಡವಾಗಿ ಬಂದ ಕಾರಣಕ್ಕೆ ವಿಮಾನ ಏರಲು ಸಿಬ್ಬಂದಿ ಅವಕಾಶ ನೀಡದೇ ಇದ್ದಾಗ ಇಂಡಿಗೋ ಏರ್‌ ಲೈನ್ಸ್‌ ಸಿಬ್ಬಂದಿ ಮೇಲೆ ಕೂಗಾಡಿರುವ ಸಂಸದ ಜೆ.ಸಿ. ದಿವಾಕರ ರೆಡ್ಡಿ, ಕೆಲವೊಂದು ಪೀಠೋಪಕರಣ ಹಾಗೂ ಪ್ರಿಂಟರ್‌ ಅನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆ ನಡೆಯುತ್ತಿದ್ದಾಗ ನಾಗರಿಕ ವಿಮಾನಯಾನ ಸಚಿವರೂ ಆಗಿರುವ ತೆಲುಗುದೇಶಂ ಮುಖಂಡ ಅಶೋಕ ಗಜಪತಿ ರಾಜು ವಿಮಾನ ನಿಲ್ದಾಣದಲ್ಲೇ ಇದ್ದರು. ಅವರು ಸಂಸದನ ನೆರವಿಗೆ ಧಾವಿಸಲಿಲ್ಲ ಎನ್ನಲಾಗಿದೆ. ದಿವಾಕರ ರೆಡ್ಡಿ ದಾಂಧಲೆಗೆ ಮಣಿದಿರುವ ಇಂಡಿಗೋ ವಿಮಾನಯಾನ ಸಂಸ್ಥೆ ಅವರನ್ನು ವಿಮಾನದಲ್ಲಿ ಕರೆದೊಯ್ದಿದೆ. ಆದರೆ ಇದೀಗ ಸಂಸದನ ಗೂಂಡಾಗಿರಿಗೆ ತಿರುಗೇಟು ನೀಡಿರುವ ವಿಮಾನಯಾನ ಸಂಸ್ಥೆಗಳು ಅವರ ವಿಮಾನಯ ಪ್ರಯಾಣಕ್ಕೆ ನಿಷೇಧ ಹೇರಿವೆ. ಆರಂಭದಲ್ಲಿ ಇಂಡಿಗೋ ಸಂಸ್ಥೆ ಮಾತ್ರ ಕಠಿಣ ನಿರ್ಧಾರ ತಳೆದಿತ್ತು. ಇದೀಗ ಏರ್ ಇಂಡಿಯಾ, ಸ್ಪೈಸ್ ಜೆಟ್, ಗೋಏರ್, ಜೆಟ್ ಏರ್ ವೇಸ್  ಮತ್ತು ವಿಸ್ತಾರ ಏರ್ ಲೈನ್ಸ್ ಗಳೂ ಸಂಸದನ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿವೆ. ಅಂತೆಯೇ ಸಂಸದ ಜೆಸಿ ದಿವಾಕರ್ ರೆಡ್ಡಿಯನ್ನು ತಮ್ಮ ಕಪ್ಪು ಪ್ರಯಾಣಿಕರ ಪಟ್ಟಿಗೆ ಸೇರಿಸಿದೆ ಎಂದು ಹೇಳಲಾಗುತ್ತಿದೆ.

ಏನಿದು ಘಟನೆ?
ವಿಜಯವಾಡದಿಂದ ಹೈದರಾಬಾದ್‌ಗೆ ಇಂಡಿಗೋ ಏರ್‌ಲೈನ್ಸ್‌ ಗುರುವಾರ ಬೆಳಗ್ಗೆ ಹೊರಡಬೇಕಿತ್ತು. ಸಾಮಾನ್ಯವಾಗಿ ವಿವಿಐಪಿಗಳು ವಿಮಾನ ಪ್ರಯಾಣ ಮಾಡುವಾಗ ಅವರ ಆಪ್ತ ಸಹಾಯಕರು ಬಂದು ಬೋರ್ಡಿಂಗ್‌ ಪಾಸ್‌ ಪಡೆದುಕೊಳ್ಳುತ್ತಾರೆ. ಗಣ್ಯರು ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ವಿಮಾನ ಸಿಬ್ಬಂದಿಗೂ ತಿಳಿಸುತ್ತಾರೆ. ಆದರೆ ದಿವಾಕರ ರೆಡ್ಡಿ ಅವರಿಂದ ಅಂತಹ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ದೇಶೀಯ ವಿಮಾನದಲ್ಲಿ ಪ್ರಯಾಣಿಸುವವರು ವಿಮಾನ ಹೊರಡುವುದಕ್ಕಿಂತ 45 ನಿಮಿಷ ಮುಂಚಿತವಾಗಿ ಬಂದಿರಬೇಕು. ಆದರೆ ಜೆ.ಸಿ. ದಿವಾಕರ ರೆಡ್ಡಿ ಅವರು ವಿಮಾನ ಇನ್ನೇನು ಟೇಕಾಫ್‌ ಆಗಲು 28 ನಿಮಿಷಗಳು ಇವೆ ಎನ್ನುವಾಗ ವಿಮಾನ ನಿಲ್ದಾಣ ಪ್ರವೇಶಿಸಿದರು. ಬೋರ್ಡಿಂಗ್‌ ಪಾಸ್‌ ಕೊಡಲು ಸಿಬ್ಬಂದಿ ನಿರಾಕರಿಸಿದಾಗ ವಾಚಾಮಗೋಚರವಾಗಿ ನಿಂದಿಸಿ, ದಾಂಧಲೆಗೆ ಇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com