ಮುಂಬಯಿ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರನ್ನು ಬಾಂದ್ರಾದ ಉಪನಗರದಲ್ಲಿ ನಿವಾಸದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಿದ್ದಾರೆ.
ಅಮಿತ್ ಷಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಠಾಕ್ರೆ ಅವರ ‘ಮಾತೋಶ್ರೀ‘ ನಿವಾಸಕ್ಕೆ ಭೇಟಿ ಮಾಡಿದ್ದಾರೆ. ಬೆಳಿಗ್ಗೆ 10ಕ್ಕೆ ಠಾಕ್ರೆ ಅವರ ನಿವಾಸದಲ್ಲಿ ಆರಂಭವಾದ ಸಭೆ ಸುಮಾರು 70 ನಿಮಿಷ ಕಾಲ ನಡೆದಿದೆ.
ಎನ್‌ಡಿಎ ಸರ್ಕಾರ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮ ಗೊಳಿಸುವ ಮುನ್ನ ತನ್ನ ಮೈತ್ರಿಕೂಟವನ್ನು ಬಲಪಡಿಸುವಲ್ಲಿ ತೊಡಗಿದ್ದು, ಈ ನಿಟ್ಟಿಲ್ಲಿ ಅಮಿತ್ ಷಾ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆ ನಿಮಿತ್ತ ಮೂರು ದಿನಗಳ ಭೇಟಿಗೆ ಆಗಮಿಸಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಘೋಷಿಸಿದ ನಂತರವಷ್ಟೇ ಬೆಂಬಲ ಕುರಿತು ತಮ್ಮ ನಿಲುವು ಸ್ಪಷ್ಟ ಪಡಿಸುವುದಾಗಿ ಶಿವಸೇನೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬುದನ್ನು ಪ್ರಕಟಿಸಲಿದ್ದಾರೆ. ಶಿವಸೇನೆ ತಮಗೆ ಬೆಂಬಲ ನೀಡುತ್ತದೆ ಎಂದು ಅಮಿತ್ ಶಾ ಭರವಸೆ ವ್ಯಕ್ತ ಪಡಿಸಿದ್ದಾರೆ.