ನವದೆಹಲಿ: ರಾಷ್ಟ್ರಪತಿ ಹುದ್ದೆ ಎಂಬುದು ಪಕ್ಷ ರಾಜಕಾರಣಕ್ಕಿಂತ ದೊಡ್ಡದು, ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ ಎಂದು ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು. ನಾನು ಗವರ್ನರ್ ಆಗಿದ್ದಾಗಿನಂದಲೂ ಯಾವುದೇ ಪಕ್ಷಕ್ಕೆ ಸೇರಿದವನಾಗಿರಲಿಲ್ಲ, ನನಗೆ ಪಕ್ಷಕ್ಕಿಂತ ದೇಶ ಮುಖ್ಯ ಎಂದು ಹೇಳಿದ್ದಾರೆ.
ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ, ರಾಷ್ಚ್ರಪತಿ ಹುದ್ದೆಯನ್ನು ಪಕ್ಷ ರಾಜಕಾರಣದಿಂದ ಹೊರಗಿಡುತ್ತೇನೆ, ಅಭಿವೃದ್ಧಿಯೆ ನನ್ನ ಪ್ರಥಮ ಆದ್ಯತೆ, ಇದಕ್ಕಾಗಿ ನೀವೆಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೊರತು ಪಡಿಸಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು, ಮೈತ್ರಿ ಇರುವ ರಾಜ್ಯಗಳ ಸಿಎಂಗಳು ಕೂಡ ಕೋವಿಂದ್ ನಾಮ ಪತ್ರ ಸಲ್ಲಿಸುವ ವೇಳೆ ಹಾಜರಿದ್ದರು.
ಪ್ರಾದೇಶಿಕ ಪಕ್ಷಗಳಾದ, ಎಐಎಡಿಎಂಕೆ, ಬಿಜೆಡಿ, ಟಿಆರ್ ಎಸ್, ಜೆಡಿಯು ಈಗಾಗಲೇ ಕೋವಿಂದ್ ಅವರಿಗೆ ತಮ್ಮ ಬೆಂಬಲ ಸೂಚಿಸಿವೆ.