ಪ್ರಾಯೋಜಿತ ಸುದ್ದಿ ಪ್ರಕರಣ: ಮಧ್ಯಪ್ರದೇಶದ ಸಚಿವರಿಗೆ 3 ವರ್ಷ ಚುನಾವಣೆ ಸ್ಪರ್ಧೆ ನಿಷೇಧ!

ಮಹತ್ವದ ಬೆಳವಣಿಗೆಯಲ್ಲಿ ಪ್ರಾಯೋಜಿತ ಸುದ್ದಿ ಹಾಗೂ ಚುನಾವಣಾ ವೆಚ್ಚದ ನಕಲಿ ದಾಖಲೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರದೇಶ ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಅವರಿಗೆ 3 ವರ್ಷಗಳ ಚುನಾವಣಾ ಸ್ಪರ್ಧೆಯಿಂದ ನಿಷೇಧ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಮಹತ್ವದ ಬೆಳವಣಿಗೆಯಲ್ಲಿ ಪ್ರಾಯೋಜಿತ ಸುದ್ದಿ ಹಾಗೂ ಚುನಾವಣಾ ವೆಚ್ಚದ ನಕಲಿ ದಾಖಲೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರದೇಶ ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ  ಅವರಿಗೆ 3 ವರ್ಷಗಳ ಚುನಾವಣಾ ಸ್ಪರ್ಧೆಯಿಂದ ನಿಷೇಧ ಹೇರಿದೆ.

ಮೂಲಗಳ ಪ್ರಕಾರ 2008ರಲ್ಲಿ ನಡೆದಿದ್ದ ಚುನಾವಣೆ ವೇಳೆ ನರೋತ್ತಮ ಮಿಶ್ರಾ ಅವರು ಚುನಾವಣಾ ಆಯೋಗಕ್ಕೆ ನೀಡಿದ್ದ ಚುನಾವಣಾ ವೆಚ್ಚದ ವಿವರ ಸರಿಯಿಲ್ಲದ ಕಾರಣ ಅವರನ್ನು 3 ವರ್ಷಗಳ ಕಾಲ ಚುನಾವಣಾ ಸ್ಪರ್ದೆಯಿಂದ  ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. 2008ರಲ್ಲಿ ಚುನಾವಣಾ ಆಯೋಗಕ್ಕೆ ನರೋತ್ತಮ್ ಮಿಶ್ರಾ ಅವರು ತಮ್ಮ ಚುನಾವಣಾ ವೆಚ್ಚದ ದಾಖಲೆ ನೀಡಿದ್ದರಾದರೂ. ಇದರಲ್ಲಿ ತಾವು ತಮ್ಮಪರ ಸುದ್ದಿಗಾಗಿ ನೀಡಿದ್ದ ಹಣವನ್ನು  ಸೇರಿಸರಿಲಿಲ್ಲ. ಆದರೆ ನಿಯಮಗಳ ಅನ್ವಯ ಸುದ್ದಿಗಾಗಿ ನೀಡಿದ ಹಣ ಕೂಡ ಚುನಾವಣಾ ವೆಚ್ಚಕ್ಕೇ ಸೇರ್ಪಡೆಯಾಗುವುದರಿಂದ ಅವರು ಆಯೋಗಕ್ಕೆ ನೀಡಿರುವ ದಾಖಲೆ ತಪ್ಪು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಇದೇ  ಕಾರಣಕ್ಕೆ ಅವರನ್ನು ಮುಂದಿನ 3 ವರ್ಷಗಳ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಇನ್ನು ರಾಜೇಂದ್ರ ಭಾರ್ತಿ ಎಂಬುವವರು ನರೋತ್ತಮ ಮಿಶ್ರಾ ವಿರುದ್ಧ 2012ರಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನಲ್ಲಿ ಮಿಶ್ರಾ ಅವರು ಆಯೋಗ ನಿಗದಿ ಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ಹಣವನ್ನು ಪ್ರಚಾರಕ್ಕೆ  ವ್ಯಯಿಸಿದ್ದು, ಆಯೋಗಕ್ಕೆ ನೀಡಿರುವ ದಾಖಲೆಗಳಲ್ಲಿ ಸುದ್ದಿಗಾಗಿ ನೀಡಿರುವ ಹಣದ ವಿವರಗಳನ್ನೇ ನೀಡಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ಆಯೋಗ ತನಿಖೆ ನಡೆಸುತ್ತಿತ್ತಾದರೂ, ಆಯೋಗದ ತನಿಖೆಯನ್ನು  ವಜಾಗೊಳಿಸುವಂತೆ ಆಗ್ರಹಿಸಿ ಮಿಶ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಮಿಶ್ರಾ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಮಿಶ್ರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರಾದರೂ ಸುಪ್ರೀಂ ಕೋರ್ಟ್ ಕೂಡ  ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದಿತ್ತು.

ಇದೀಗ ಮಿಶ್ರಾ ಅವರ ತಪ್ಪು ಸಾಬೀತಾಗಿದ್ದು, ಚುನಾವಣಾ ಆಯೋಗ ಅವರಿಗೆ ಮೂರು ವರ್ಷಗಳ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸಿದೆ.

ಮಧ್ಯ ಪ್ರದೇಶ ರಾಜಕೀಯವಲಯದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನರೋತ್ತಮ್ ಮಿಶ್ರಾ ಅವರು ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅಂತೆಯೇ ಚೌಹ್ವಾಣ್ ಸಂಪುಟದ 2ನೇ ಪ್ರಭಾವಿ ಸಚಿವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಮಿಶ್ರಾ ಆರೋಗ್ಯ ಇಲಾಖೆಯೊಂದಿಗೆ, ಸಾರ್ವಜನಿಕ ಸಂಪರ್ಕ, ಸಂಸದೀಯ ವ್ಯವಹಾರ ಹಾಗೂ ನೀರಾವರಿ ಇಲಾಖೆಗಳ  ಜವಾಬ್ದಾರಿ ಕೂಡ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com