ಮುಂಬೈ: ಶೀನಾ ಬೊರಾ ಹತ್ಯೆಯ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಯವರ ಕೈಗಳು ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿ ಹೇಳುತ್ತದೆ. ಬೈಸುಲ್ಲ ಜೈಲಿನಲ್ಲಿ ಇತ್ತೀಚೆಗೆ ಹಿಂಸಾಚಾರ ನಡೆದಿದ್ದು ಇಂದ್ರಾಣಿ ಮುಖರ್ಜಿ ಮತ್ತು ಜೈಲಿನ ಇತರ ಕೈದಿಗಳ ಮಧ್ಯೆ ಜಗಳಗಳಾಗಿದ್ದವು ಎಂದು ವರದಿಯಾಗಿತ್ತು. ಈ ಸಂದರ್ಭದಲ್ಲಿ ಇಂದ್ರಾಣಿ ಮುಖರ್ಜಿಯವರಿಗೆ ಆಯುಧದಿಂದ ಹೊಡೆದಿದ್ದರು.
ಮಹಿಳಾ ಕಾರಾಗೃಹದಲ್ಲಿ ಹಿಂಸಾಚಾರ ನಡೆದ ಬಗ್ಗೆ ಇಂದ್ರಾಣಿ ಮುಖರ್ಜಿ ವಿರುದ್ಧ ಕೇಸು ದಾಖಲಾಗಿತ್ತು. ಇದಕ್ಕೆ ಮೊನ್ನೆ ಮಂಗಳವಾರ ಕೋರ್ಟ್ ಮೊರೆ ಹೋದ ಇಂದ್ರಾಣಿ ಮುಖರ್ಜಿ, ಆರೋಪಿಯೊಬ್ಬರ ಕೊಲೆಗೆ ಸಂಬಂಧಪಟ್ಟಂತೆ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಜೈಲಿನ ಅಧಿಕಾರಿಗಳು ತಮಗೆ ಹೊಡೆದಿದ್ದರು ಎಂದು ಆರೋಪಿಸಿದ್ದರು.
ಇಂದ್ರಾಣಿ ಪರ ವಕೀಲ ಗುಂಜನ್ ಮಂಗಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ತಾವು ಇಂದ್ರಾಣಿಯವರನ್ನು ಭೇಟಿ ಮಾಡಲು ಹೋಗಿದ್ದು, ಮಹಿಳಾ ಕೈದಿಯೊಬ್ಬರ ಸಾವಿಗೆ ಸಂಬಂಧಪಟ್ಟಂತೆ ತಮಗೆ ಜೈಲಿನ ಅಧಿಕಾರಿಗಳು ಹೊಡೆದರು ಎಂದು ಇಂದ್ರಾಣಿ ತಮ್ಮ ಅಳಲನ್ನು ತೋಡಿಕೊಂಡರೆಂದು ತಿಳಿಸಿದ್ದಾರೆ.
ಅವಳ ಕೈ, ಕಾಲುಗಳು ಮತ್ತು ತಲೆಗಳಲ್ಲಿ ಆದ ಗಾಯಗಳನ್ನು ತೋರಿಸಿದರು ಎಂದು ವಕೀಲರು ಅರ್ಜಿಯಲ್ಲಿ ತೋರಿಸಿದ್ದಲ್ಲದೆ ಜೈಲಿನ ಸಿಬ್ಬಂದಿ ಹಾಗೂ ಸೂಪರಿಂಟೆಂಡೆಂಟ್ ತಮಗೆ ಬೈದಿದ್ದಾರೆ ಎಂದು ಹೇಳಿದರು ಎಂದು ಸಹ ಅರ್ಜಿಯಲ್ಲಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಇಂದ್ರಾಣಿ ಮುಖರ್ಜಿಯವರನ್ನು ವೈದ್ಯಕೀಯ ಪರೀಕ್ಷೆಗೆ ಮುಂಬೈಯ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.