ಭಾರೀ ಮಳೆ, ಭೂ ಕುಸಿತ: ಅಮರನಾಥ ಯಾತ್ರೆ ಸ್ಥಗಿತ

ಜಮ್ಮುವಿನ ಪಹಲ್ಗಾಮ್ ಮತ್ತು ಬಲ್ತಲ್ ಅವಳಿ ಮಾರ್ಗಗಳಲ್ಲಿ ತೀವ್ರ ಭೂಕುಸಿತದಿಂದಾಗಿ ವಾರ್ಷಿಕ ಅಮರ...
ಹೆದ್ದಾರಿಯಲ್ಲಿನ ಭೂ ಕುಸಿತದಿಂದ ಸಂಚಾರ ಸ್ಥಗಿತಗೊಂಡಿರುವುದು(ಫೋಟೋ ಕೃಪೆ-ಎಎನ್ ಐ ಸುದ್ದಿ ಸಂಸ್ಥೆ)
ಹೆದ್ದಾರಿಯಲ್ಲಿನ ಭೂ ಕುಸಿತದಿಂದ ಸಂಚಾರ ಸ್ಥಗಿತಗೊಂಡಿರುವುದು(ಫೋಟೋ ಕೃಪೆ-ಎಎನ್ ಐ ಸುದ್ದಿ ಸಂಸ್ಥೆ)
ನವದೆಹಲಿ: ಜಮ್ಮುವಿನ ಪಹಲ್ಗಾಮ್ ಮತ್ತು ಬಲ್ತಲ್ ಅವಳಿ ಮಾರ್ಗಗಳಲ್ಲಿ ತೀವ್ರ ಭೂಕುಸಿತದಿಂದಾಗಿ ವಾರ್ಷಿಕ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ(ಎಸ್ಎಎಸ್ ಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರೆ ನಿನ್ನೆಯಷ್ಟೇ ಆರಂಭಗೊಂಡಿತ್ತು.
ಭಾರೀ ಮಳೆಯಿಂದ ಈ ಎರಡೂ ಮಾರ್ಗಗಳಲ್ಲಿ ಇಂದು ನಸುಕಿನ ವೇಳೆ ಭೂ ಕುಸಿತವುಂಟಾದ್ದರಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಯಾತ್ರಿಕರು ಬಲ್ತಲ್ ಮತ್ತು ನುನ್ ವಾನ್ ನಲ್ಲಿನ ಮೂಲ  ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಯಾತ್ರೆಯ ಸ್ಥಿತಿಗತಿ ಕುರಿತು ನಿಯಂತ್ರಣ ಕೊಠಡಿ ಅಥವಾ ಸಹಾಯವಾಣಿ ಮೂಲಕ ಜನರಿಗೆ ತಿಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಬಿಗಿ ಭದ್ರತೆ ನಡುವೆ ನಿನ್ನೆ ಯಾತ್ರೆ ಆರಂಭಗೊಂಡಿದ್ದು 6,000ಕ್ಕೂ ಅಧಿಕ ಮಂದಿ ಯಾತ್ರಿಕರು ಅಹಿತಕರ ಹವಾಮಾನ ಪರಿಸ್ಥಿತಿಗಳ ಮಧ್ಯೆಯೂ ಮೂಲ ಶಿಬಿರದ ಹತ್ತಿರದ ದೇವಳದ ಗರ್ಭಗುಡಿಯಲ್ಲಿ ಪ್ರಥಮ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಾತ್ರೆಯ ಮೊದಲ ದಿನವಾದ ನಿನ್ನೆ ಅಮರನಾಥಕ್ಕೆ ಹೋಗುವ ದಾರಿಯಲ್ಲಿ ಬಂದೂಕು ದಾಳಿಯಿಂದ ಮೃತಪಟ್ಟಿದ್ದಾರೆ. ಈ ಬಾರಿ ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್.ವೊಹ್ರಾ ಕೂಡ ಯಾತ್ರಿಕರ ಮೊದಲ ತಂಡದಲ್ಲಿ ಇದ್ದಾರೆ.
ಯಾತ್ರಿಕರ ಎರಡನೇ ತಂಡದಲ್ಲಿ 2,481 ಯಾತ್ರಿಕರಿದ್ದು, ಅವರಲ್ಲಿ 1,638 ಪುರುಷರು, 663 ಮಹಿಳೆಯರು, 180 ಮಂದಿ ಸನ್ಯಾಸಿಗಳು ಇದ್ದಾರೆ. 
ಬಂದ್ ಆದ ಜಮ್ಮು-ಶ್ರೀನಗರ ಹೆದ್ದಾರಿ: ಇನ್ನೊಂದೆಡೆ ಭಾರೀ ಭೂಕುಸಿತದಿಂದಾಗಿ 300 ಕಿಲೋ ಮೀಟರ್ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕೂಡ ರಂಬನ್ ಮತ್ತು ಉದಂಪುರ್ ಜಿಲ್ಲೆಗಳಲ್ಲಿ ಬಂದ್ ಆಗಿವೆ. ಇಲ್ಲಿ ವಾಹನ ಸಂಚರಿಸುತ್ತಿಲ್ಲ.

ಭಾರೀ ಮಳೆಯಿಂದಾಗಿ ನಶ್ರಿ, ಬಾಲಿ ನಲ್ಹ ಮತ್ತು ಪಂತಿಯಲ್ ಪ್ರದೇಶದಲ್ಲಿ ಭೂ ಕುಸಿತವುಂಟಾಗಿ ಹೆದ್ದಾರಿ ಮುಚ್ಚಲ್ಪಟ್ಟಿದ್ದು ನೂರಾರು ಜನರಿಗೆ ಸಂಚರಿಸುವುದು ಅಸಾಧ್ಯವಾಗಿದೆ.

ಧಾರಾಕಾರ ಸತತ ಮಳೆಯಿಂದಾಗಿ ರಂಬನ್ ಮತ್ತು ಪಂತಿಯಾಲ್ ಪ್ರದೇಶದಲ್ಲಿ ಎರಡು-ಮೂರು ಬಾರಿ ಭೂ ಕುಸಿತವುಂಟಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಭೂ ಕುಸಿತ ಉದಂಪುರ್ ಜಿಲ್ಲೆಯ ಬಾಲಿ ನಲ್ಹ ಪ್ರದೇಶದಲ್ಲಿ ಉಂಟಾಗಿ ರಂಬನ್ ಜಿಲ್ಲೆಯ ನಶ್ರಿ ಸುರಂಗ ಮಾರ್ಗದಲ್ಲಿ ಸಣ್ಣ ಮಟ್ಟಿನ ಭೂ ಕುಸಿತವಾಗಿದೆ. ಇದರಿಂದಾಗಿ ಇಂದು ಬೆಳಗ್ಗೆಯಿಂದ 150ಕ್ಕೂ ಹೆಚ್ಚು ವಾಹನಗಳು ಹೆದ್ದಾರಿಯ ಅನೇಕ ಕಡೆ ಸಂಚರಿಸಲು ಸಾಧ್ಯವಾಗದೆ ನಿಂತಿವೆ.

ಕುಂಭದ್ರೋಣವರ್ಷದಿಂದಾಗಿ ಹೆದ್ದಾರಿಯಲ್ಲಿನ ಕಲ್ಲು, ಮಣ್ಣುಗಳನ್ನು ತೆರವುಗೊಳಿಸುವ ಕಾರ್ಯ ಕೂಡ ಕಷ್ಟವಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com