ಚಿಂತೆ ಬೇಡ... ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಅಮಾನ್ಯವಾಗಲ್ಲ!

ಮಹತ್ವದ ಬೆಳವಣಿಗೆಯಲ್ಲಿ ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳನ್ನು ಅಮಾನ್ಯಗೊಳಿಸುವುದಿಲ್ಲ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳನ್ನು ಅಮಾನ್ಯಗೊಳಿಸುವುದಿಲ್ಲ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವಂತೆ, ಪ್ಯಾನ್ ಕಾರ್ಡ್ ಗೆ ಆಧಾರ್ ನಂಬರ್ ಜೋಡಣೆ ಮಾಡಲು ಕೇಂದ್ರ ಸರ್ಕಾರ ಜುಲೈ 1 ರ ಗಡುವು ನೀಡಿತ್ತು. ಆದರೆ ತಾಂತ್ರಿಕ ಕಾರಣವೂ ಸೇರಿದಂತೆ ಇತರೆ ಕಾರಣಗಳಿಂದಾಗಿ  ಬಹುತೇಕ ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ನಂಬರ್ ಜೋಡಣೆ ಮಾಡಲು ಸಾಧ್ಯವಾಗಿಲ್ಲ, ಹೀಗಾಗಿ ಕೇಂದ್ರ ತೆರಿಗೆ ಇಲಾಖೆ ಈ ನಿರ್ಧಾರಕ್ಕೆ ಬಂದಿದ್ದು, ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ಗಳನ್ನು  ಅಮಾನ್ಯಗೊಳಿಸುವುದಿಲ್ಲ ಎಂದು ತಿಳಿಸಿದೆ.

ಇದಾಗ್ಯೂ ಪ್ಯಾನ್ ಕಾರ್ಡ್ ಗೆ ಆಧಾರ್ ನಂಬರ್ ಕಡ್ಡಾಯಗೊಳಿಸುವ ನಿರ್ಧಾರವನ್ನು ಮರು ಪರಿಶೀಲಿಸುವು ಕುರಿತಂತೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇನ್ನು ತೆರಿಗೆ ಪಾವತಿ ಅರ್ಜಿಯಲ್ಲಿ ತೆರಿಗೆ ಪಾವತಿ  ವೇಳೆ ತೆರಿಗೆ ಪಾವತಿದಾರರು ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಗಳನ್ನು ನಮೂದಿಸಲು ಅವಕಾಶ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು, ಆಧಾರ್ ನಂಬರ್ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳನ್ನು ಅಮಾನ್ಯಗೊಳಿಸುವುದಿಲ್ಲವಾದರೂ, ತೆರಿಗೆ ಪಾವತಿ ಅಥವಾ ಇ-ತೆರಿಗೆ ಪಾವತಿ ವೇಳೆ ಆಧಾರ್  ನಂಬರ್ ಅಥವಾ ಅದರ ಎನ್ ರಾಲ್ ಮೆಂಟ್ ನಂಬರ್ ಮತ್ತು ಪ್ಯಾನ್ ನಂಬರ್ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಅಂತೆಯೇ ವಾರ್ಷಿಕ ವರಮಾನ 5 ಲಕ್ಷಕ್ಕಿಂತ ಹೆಚ್ಚಿರುವ ವ್ಯಕ್ತಿಗಳು ಕಡ್ಡಾಯವಾಗಿ ಇ-ತೆರಿಗೆ  ಪಾವತಿಸುವುದು ಕಡ್ಡಾಯವಾಗಿರುತ್ತದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಈ ನಿಯಮದಿಂದ ಹೊರತಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಜುಲೈ 1ರಿಂದ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಆಧಾರ್ ನಂಬರ್ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದ್ದು, ಆಧಾರ್ ಕಾರ್ಡ್ ಇಲ್ಲದ ಹೊರತು ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದೂ ಇಲಾಖೆಯ  ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com