ಎಲ್ಇಟಿ ಕಮಾಂಡರ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಲಷ್ಕರ್ ಉಗ್ರ ಸಂಘಟನೆಯ ಮುಖಂಡ ಬಷೀರ್ ಲಷ್ಕರಿ....
ಕಾಶ್ಮೀರ ಎನ್ ಕೌಂಟರ್
ಕಾಶ್ಮೀರ ಎನ್ ಕೌಂಟರ್

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಲಷ್ಕರ್ ಉಗ್ರ ಸಂಘಟನೆಯ ಮುಖಂಡ ಬಷೀರ್ ಲಷ್ಕರಿ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಅನಂತ್ ನಾಗ್ ಜಿಲ್ಲೆಯ ದೈಲ್ಗಾಂ ಗ್ರಾಮದಲ್ಲಿ ಕಟ್ಟಡವೊಂದರಲ್ಲಿ ಅವಿತಿದ್ದ ಉಗ್ರರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿದ್ದು, ಈ ವರೆಗೂ ಕಟ್ಟಡದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಹತ್ಯೆ  ಮಾಡಲಾಗಿದೆ. ಹತರಾದ ಉಗ್ರರ ಪೈಕಿ ಓರ್ವ ಉಗ್ರ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಬಷೀರ್ ಲಷ್ಕರಿ ಎಂದು ಗುರುತಿಸಲಾಗಿದೆ. ಅಂತೆಯೇ ಎನ್ ಕೌಂಟರ್ ನಲ್ಲಿ ಓರ್ವ ಮಹಿಳೆ ಕೂಡ ಸಾವನ್ನಪ್ಪಿದ್ದಾರೆ  ಎಂದು ಸೇನಾ ಮೂಲಗಳು ತಿಳಿಸಿವೆ.

ದೈಲ್ಗಾಂನ ಬಿರ್ನ್ಹಿ ಬರ್ಪೊರಾದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಟ್ಟಡವನ್ನು ಸುತ್ತುವರೆದ ಭಾರತೀಯ ಸೇನಾಪಡೆಯ ಸೈನಿಕರು ಉಗ್ರರು ಯಾವುದೇ ಮಾರ್ಗದಲ್ಲಿ  ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ವೇಳೆ ಉಗ್ರರು ಸೈನಿಕರತ್ತ ಗುಂಡಿನ ಸುರಿಮಳೆಗರೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ತಾಹಿರ್ ಬೇಗಂ ಎಂದು  ಗುರುತಿಸಲಾಗಿದೆ. ಉಗ್ರರ ವಿರುದ್ಧ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಸತತ ಕಾರ್ಯಾಚರಣೆ ಬಳಿಕ ಇದೀಗ ಲಷ್ಕರ್ ಉಗ್ರ ಮುಖಂಡ ಬಷೀರ್ ಲಷ್ಕರಿ ಸೇರಿದಂತೆ ಮೂವರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ.

ಕಟ್ಟಡದಲ್ಲಿ ಉಗ್ರರು ಅವಿತಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಸೈನಿಕರು ಕಟ್ಟಡ ಪ್ರವೇಶಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತೆಯೇ ಸೈನಿಕರು ಕಟ್ಟಡದಲ್ಲಿ ಶೋಧ ಕಾರ್ಯ ನಡೆಸಲಿದ್ದಾರೆ.

ಕಳೆದ ಜೂನ್ 16ರಂದು ಇದೇ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಐದು ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿ ಹಿಂದೆ ಲಷ್ಕರ್ ಉಗ್ರ ಮುಖಂಡ ಬಷೀರ್ ಲಷ್ಕರಿ ಪಾತ್ರ ಇದೆ ಎಂದು ಹೇಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com