ಗುರ್ಮೆಹರ್ ಕೌರ್'ಗೆ ಪೊಲೀಸ್ ರಕ್ಷಣೆ: ದೆಹಲಿ ವಿವಿಯಲ್ಲಿ ಪ್ರತಿಭಟನೆಗೆ ಎಬಿವಿಪಿ ಸಿದ್ಧತೆ

ಎಬಿವಿಪಿ ವಿರುದ್ಧ ಸಿಡಿದೆದ್ದಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರಿಗೆ ಅತ್ಯಾಚಾರ ಬೆದರಿಕೆ ಕರೆಗಳು ಬಂದಿರುವ ಹಿನ್ನಲೆಯಲ್ಲಿ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಗುರುವಾರ ತಿಳಿದುಬಂದಿದೆ...
ಗುರ್ಮೆಹರ್ ಕೌರ್
ಗುರ್ಮೆಹರ್ ಕೌರ್
ನವದೆಹಲಿ: ಎಬಿವಿಪಿ ವಿರುದ್ಧ ಸಿಡಿದೆದ್ದಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರಿಗೆ ಅತ್ಯಾಚಾರ ಬೆದರಿಕೆ ಕರೆಗಳು ಬಂದಿರುವ ಹಿನ್ನಲೆಯಲ್ಲಿ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಗುರುವಾರ ತಿಳಿದುಬಂದಿದೆ. 
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘರ್ಷಣೆ ಸಂಬಂಧ ಎಬಿವಿಪಿ ವಿರುದ್ದ ಕಿಡಿಕಾರಿದ್ದ ಗುರ್​ಮೆಹರ್ ಕೌರ್ ಅವರು, ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ ಗಳನ್ನು ಹಾಕಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಗುರ್ಮೆಹರ್ ಅವರ ಕುರಿತಂತೆ ಪರ ಹಾಗೂ ವಿರೋಧ ದನಿಗಳು ಆರಂಭಗೊಂಡಿವೆ. 
ಸಾಮಾಜಿಕ ಜಾಲತಾಣದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೊಡ್ಡ ಸಮರವನ್ನೇ ಸಾರಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹರ್ ಕೌರ್ ತಮ್ಮ ಹೋರಾಟವನ್ನು ಅರ್ಧಕ್ಕೆ ಬಿಟ್ಟು ತಮ್ಮೂರು ಜಲಂಧರ್ ಗೆ ತೆರಳಿದರೂ ಕೂಡ ಅವರು ಹತ್ತಿಸಿದ್ದ ಕಿಡಿ ಇನ್ನೂ ಆರಿಲ್ಲ. ಪ್ರಕರಣ ಸಂಬಂಧ ರಾಜಕೀಯ ಕೆಸರೆರಚಾಟಗಳು ಕೂಡ ಆರಂಭಗೊಂಡಿವೆ. 
ಎಬಿವಿಪಿ ವಿರುದ್ದ ಸಮರ ಸಾರಿದ್ದ ಗುರ್ಮೆಹರ್ ಕೌರ್ ಅವರಿಗೆ ಅತ್ಯಾಚಾರ ಸೇರಿದಂತೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಗುರ್ಮೆಹರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಿಳಾ ಆಯೋಗ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮಗೊಳ್ಳುವಂತೆ ದೆಹಲಿ ಪೊಲೀಸರಿಗೆ ಆಗ್ರಹಿಸಿತ್ತು. ಇದರಂತೆ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಿದ್ದರು. ಇದೀಗ ಗುರ್ಮೆಹರ್ ಕೌರ್ ಅವರಿಗೆ ಪೊಲೀಸ್ ರಕ್ಷಣೆಯನ್ನು ಒದಗಿಸಿದ್ದಾರೆ. 
ಇವೆಲ್ಲದರ ಬೆಳವಣಿಗೆ ನಡುವೆಯೇ ದೆಹಲಿ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಪ್ರತಿಭಟನೆ ನಡೆಸಲು ಎಬಿವಿಪಿ ಸಿದ್ಧತೆಗಳನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ. ದೆಹಲಿ ವಿಶ್ವವಿದ್ಯಾಲಯ ಹಾಗೂ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಇದರ ಜೊತೆಗೆಯೇ ಎಬಿವಿಪಿ ಕೂಡ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಎರಡೂ ವಿಶ್ವವಿದ್ಯಾಲಯಗಳಲ್ಲೂ ಭದ್ರತೆಯನ್ನು ಹೆಟ್ಟಿಸಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com