ಕೇಂದ್ರಪರ: ಒಡಿಶಾದ ಕೇಂದ್ರಪರ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಕೋತಿಗಳ ಕಾಟ ತೀವ್ರವಾಗಿದ್ದು, ಕಪಿಗಳ ಚೇಷ್ಟೆಯಿಂದಾಗಿ ಮಕ್ಕಳು ಸೇರಿದಂತೆ ಸುಮಾರು 12 ಮಂದಿ ಗಾಯಗೊಂಡಿದ್ದಾರೆ.
ಕಳೆದ ಮಂಗಳವಾರದಿಂದ ಇದುವರೆಗೆ ಕೋತಿಗಳ ದಾಳಿಯಿಂದಾಗಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರಪರ ಜಿಲ್ಲೆಯ ದೆರಬಿಶ್ ಪ್ರದೇಶದ ಜನರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಕೋತಿಗಳ ಕಾಟ ನಿಯಂತ್ರಿಸಲು ಅರಣ್ಯ ಇಲಾಖೆಯಲ್ಲಿ ತಜ್ಞರ ತಂಡವಿದ್ದು, ವಸತಿ ಪ್ರದೇಶಗಳಲ್ಲಿರುವ ಅಂತಹ ಪ್ರಾಣಿಗಳನ್ನು ಸ್ಥಳಾಂತರಿಸಲು ನಾವು ಅವರ ಸಹಾಯ ಕೋರಿದ್ದೇವೆ ಎಂದು ಕೇಂದ್ರಪರ ಜಿಲ್ಲಾ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಧನಂಜಯ್ ಸ್ವೈನ್ ಅವರು ಹೇಳಿದ್ದಾರೆ.
ಕೋತಿಗಳು ಹಲವು ಕಡೆ ದಾಳಿ ನಡೆಸಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಆದಷ್ಟು ಬೇಗ ಕೋತಿಗಳ ಕಾಟ ತಪ್ಪಿಸುವಂತೆ ನಾವು ಅರಣ್ಯ ಇಲಾಖೆ ಸಿಬ್ಬಂದಿಗೆ ಕೇಳಿಕೊಂಡಿದ್ದೇವೆ ಎಂದು ಸ್ವೈನ್ ತಿಳಿಸಿದ್ದಾರೆ.