
ಕೊಲ್ಙಾಪುರ: ಮಹಾರಾಷ್ಟ್ರದಲ್ಲಿ ಮತ್ತೆ ಸಮಾಜ ಚಿಂತಕರ ಹತ್ಯಾ ಸರಣಿ ಮುಂದುವರೆದಿದ್ದು, ವಿಚಾರವಾದಿ, ದಿವಂಗತ ನರೇಂದ್ರ ದಾಭೋಲ್ಕರ್ ಅವರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ, ಅಂಬೇಡ್ಕರ್ ವಾದಿ ಚಿಂತಕ ಡಾ.ಕೃಷ್ಣ ಕಿರ್ವಾಲೆ (62 ವರ್ಷ) ಅವರನ್ನು ಶುಕ್ರವಾರ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದ ರಾಜೇಂದ್ರ ನಗರದಲ್ಲಿರುವ ಅವರ ಮನೆಯಲ್ಲಿ, ಅವರ ಮೃತದೇಹ ಪತ್ತೆಯಾಗಿದ್ದು, ಹರಿತವಾದ ಚಾಕುವಿನಿಂದ ಹಲವು ಬಾರಿ ಇರಿದು ಅವರನ್ನು ಕೊಲ್ಲಲಾಗಿದೆ ಎಂದು ಕೊಲ್ಙಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಹತ್ಯೆಗೂ ಮುನ್ನ ಕಿರ್ವಾಲೆ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಬಳಿಕ ಅವರ ಮನೆಯೊಳಗೇ ನುಗ್ಗಿ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುದು ತಿಳಿದು ಬಂದಿಲ್ಲವಾದರೂ, ಹತ್ಯೆ ಪ್ರಕರಣ ಸಂಬಂಧ ಓರ್ವ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಿರ್ವಾಲೆ ಹತ್ಯೆ ಬೆನ್ನಲ್ಲೇ ಕಿರ್ವಾಲೆಯಲ್ಲಿರುವ ಅವರ ಅನುಯಾಯಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯದಲ್ಲಿ "ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ" ಎಂದು ಆರೋಪಿಸಿದ್ದಾರೆ. ಅಂತೆಯೇ ಸರ್ಕಾರ, ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದು ಕೇಂದ್ರ ಸಚಿವ ರಾಮದಾಸ ಆಠಾವಲೆ ಆಗ್ರಹಿಸಿದ್ದಾರೆ. ದಲಿತ ಸಾಹಿತ್ಯ, ಗ್ರಾಮೀಣ ಸಾಹಿತ್ಯದಲ್ಲಿ ಅಪಾರ ಅನುಭವಹೊಂದಿದ್ದ ಕಿರ್ವಾಲೆ ಅವರು ಶಿವಾಜಿ ವಿಶ್ವವಿದ್ಯಾಲಯದ ಮರಾಠಿ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿ ಕಿರ್ವಾಲೆ ಸೇವೆ ಸಲ್ಲಿಸಿದ್ದರು. ಇದಲ್ಲದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೆಂಟರ್ ಫಾರ್ ರೀಸರ್ಚ್ ಅಂಡ್ ಡೆವಲೆಪ್ ಮೆಂಟ್ ಆಫ್ ದಿ ವಾರ್ಸಿಟಿಯ ಮುಖ್ಯಸ್ಥರಾಗಿಯೂ ಕಿರ್ವಾಲೆ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರ ಅಂಬೇಡ್ಕರ್ ಅವರ ಚಿಂತನೆಗಳ ಬಗ್ಗೆ ಹಲವೆಡೆ ಉಪನ್ಯಾಸ ಕೂಡ ನೀಡಿದ್ದರು. ಲೇಖಕರೂ ಆಗಿದ್ದ ಅವರು, ಮರಾಠಿ ದಲಿತ ಸಾಹಿತ್ಯದ ಭಾಷೆ ಕುರಿತು ನಿಘಂಟು ರಚಿಸಿದ್ದರು.
ಇನ್ನು ಮೃತ ಕಿರ್ವಾಲೆ ಅವರು ಈ ಹಿಂದೆ ಹತ್ಯೆಗೀಡಾಗಿದ್ದ ಚಿಂತಕ ನರೇಂದ್ರ ದಾಭೋಲ್ಕರ್ ಅವರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ಈ ಹತ್ಯೆಗೂ ಧಾಬೋಲ್ಕರ್ ಹತ್ಯೆಗೂ ಸಂಬಂಧವಿರುವ ಕುರಿತು ಪೊಲೀಸರು ಶಂಕಿಸಿದ್ದಾರೆ. 2013ರಲ್ಲಿ ಪುಣೆಯಲ್ಲಿ ಚಿಂತಕ ನರೇಂದ್ರ ಧಾಬೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ 2015ರಲ್ಲಿ ಮತ್ತೋರ್ವ ಚಿಂತಕ ಗೋವಿಂದ್ ಪಾನ್ಸರೆ ಅವರನ್ನು ಕೊಲ್ಙಾಪುರದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಅಂದು ಪಾನ್ಸರೆ ಅವರ ಪತ್ನಿಗೂ ಗುಂಡು ಹಾರಿಸಲಾಗಿತ್ತು.
ಕಿರ್ವಾಲೆ ಅವರ ಹತ್ಯೆಯನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ರಾಮದಾಸ್ ಅಠಾವಲೆ ಅವರು ಕೂಡಲೇ ಸರ್ಕಾರ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಅಗ್ರಹಿಸಿದ್ದಾರೆ.
Advertisement