ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶನಿವಾರ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಮಿತ್ರ ಪಕ್ಷ ಶಿವಸೇನೆಯ ಮೇಯರ್ ಹಾದಿ ಸುಗಮಗೊಳಿಸಿದ್ದಾರೆ.
ಬಿಎಂಸಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ. ಆದರೆ ನಮ್ಮ ಕಾರ್ಪೋರೇಟರ್ ಗಳು ಬಿಎಂಸಿಯಲ್ಲಿ ಪಾರದರ್ಶಕತೆಯನ್ನು ಗಮನಿಸುತ್ತಾರೆ ಎಂದು ಫಡ್ನವಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ಸ್ಥಿರತೆ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿರುವ ಸಿಎಂ, ನಮ್ಮ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ. ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಂಸಿಯಲ್ಲಿ ನಾವು ಪ್ರತಿಪಕ್ಷವಾಗಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಆದರೆ ಪಾರದರ್ಶಕತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳುವ ಮೂಲಕ ಫಢ್ನವಿಸ್ ಅವರು ಪರೋಕ್ಷವಾಗಿ ಶಿವಸೇನೆಗೆ ಬೆಂಬಲ ನೀಡಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಮತ್ತು ಬಿಜೆಪಿ ಇತ್ತೀಚಿಗಷ್ಟೇ ಮುಕ್ತಾಯಗೊಂಡ ಬಿಎಂಸಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.