ಉ. ಪ್ರದೇಶ ಕೊನೆಯ ಹಂತದ ಮತದಾನ: ರೋಡ್ ಶೋ ಮೂಲಕ ಸ್ವಕ್ಷೇತ್ರದಲ್ಲಿ ಮೋದಿ ಮೋಡಿ

ಉತ್ತರ ಪ್ರದೇಶ ಚುನಾವಣೆ ಹಿನ್ನಲೆಯಲ್ಲಿ ಕೊನೆಯ ಹಂತದ ಮತದಾನಕ್ಕೆ ಅಂತಿಮ ಕ್ಷಣಗಣನೆ ಆರಂಭವಾಗಿರುವಂತೆಯೇ ವಾರಣಾಸಿಯಲ್ಲಿ ರೋಡ್ ಶೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
ವಾರಣಾಸಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಚುನಾವಣಾ ಪ್ರಚಾರದ ಕಾವು ತೀವ್ರಗೊಳ್ಳತೊಡಗಿದ್ದು, ಉತ್ತರ ಪ್ರದೇಶ ಚುನಾವಣೆ ಹಿನ್ನಲೆಯಲ್ಲಿ ಕೊನೆಯ ಹಂತದ ಮತದಾನಕ್ಕೆ ಅಂತಿಮ  ಕ್ಷಣಗಣನೆ ಆರಂಭವಾಗಿರುವಂತೆಯೇ ವಾರಣಾಸಿಯಲ್ಲಿ ರೋಡ್ ಶೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.

ಭಾರತೀಯ ವಾಯು ಸೇನೆಯ ವಿಶೇಷ ಹೆಲಿಕಾಪ್ಟರ್ ಮೂಲಕ ವಾರಣಾಸಿಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಇನ್ನಿತರೆ ಹಿರಿಯ ಬಿಜೆಪಿ ನಾಯಕರು ಆಹ್ವಾನಿಸಿದರು. ನಂತರ  ಬಿಜೆಪಿ ಕಾರ್ಯಕರ್ತು ಅದ್ದೂರಿಯಾಗಿ ಬರಮಾಡಿಕೊಂಡರು. 10 ಗಂಟೆ ಸುಮಾರಿಗೆ ವಾರಣಾಸಿಗೆ ಆಗಮಿಸಿದ ಮೊದಿ ಮೊದಲು ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಬಳಿಕ ಪ್ರಸಿದ್ಧ ಬನಾರಸ್  ಹಿಂದೂ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಿಂದ ತೆರೆದ ವಾಹನದಲ್ಲಿ ಮೋದಿಯವರು ರೋಡ್ ಶೋ ಆರಂಭಿಸಿದರು.

ಕಾಶಿ ವಿಶ್ವನಾಥ ಮತ್ತು ಕಾಲಭೈರವೇಶ್ವರ ದರ್ಶನ ಪಡೆದು ರೋಡ್ ಶೋ ಅಂತ್ಯಗೊಳಿಸಿದ ಮೋದಿ
ಇನ್ನು ಬೆಳಗ್ಗಿನಿಂದಲೂ ಭರ್ಜರಿಯಾಗಿ ಸಾಗಿದ ಪ್ರಧಾನಿ ಮೋದಿ ರೋಡ್ ಶೋ ಮಧ್ಯಾಹ್ನ 3ಗಂಟೆ ಸುಮಾರಿನಲ್ಲಿ ಮುಕ್ತಾಯವಾಯಿತು. ಕಾಶಿ ವಿಶ್ವನಾಥ ಸ್ವಾಮಿ ದರ್ಶನ ಪಡೆದ ಮೋದಿ ಬಳಿಕ ಕಾಲ ಭೈರವೇಶ್ವರ ದೇಗುಲಕ್ಕೆ ತೆರಳಿ ಪಕ್ಷಕ್ಕೆ ಜಯ ನೀಡುವಂತೆ ಕೇಳಿಕೊಂಡರು. ಬಳಿಕ ತಮ್ಮ ವಿದ್ಯುಕ್ತ ರೋಡ್ ಶೋವನ್ನು ಸಂಪೂರ್ಣಗೊಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 3 ದಿನಗಳ ಕಾಲ ವಾರಣಾಸಿ ಕ್ಷೇತ್ರದಲ್ಲಿಯೇ ಉಳಿದುಕೊಳ್ಳಲಿದ್ದು, ಈ ಹಿನ್ನಲೆಯಲ್ಲಿ ವಾರಣಾಸಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅರೆ ಸೇನಾ ಪಡೆಗಳನ್ನೂ  ಅಲ್ಲಲ್ಲಿ ನಿಯೋಜಿಸಲಾಗಿದೆ.

ಶನಿವಾರ ವಾರಣಾಸಿಯಲ್ಲಿ ಭರ್ಜರಿ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ ಬಳಿಕ ಕಾಶಿ ವಿಶ್ವನಾಥನ ದರ್ಶನ ಪಡೆಯಲಿದ್ದಾರೆ. ಇನ್ನು ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರವಾಗಿದ್ದು, ಅತ್ತ ಮೋದಿ ರೋಡ್ ಶೋ  ನಡೆಸುತ್ತಿದ್ದರೆ ಇತ್ತ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಇಂದು ಸಂಜೆ ಜಂಟಿ ರೋಡ್ ಶೋ ನಡೆಸಲು ಸಜ್ಜಾಗಿವೆ. ರೋಡ್ ಶೋ ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಉತ್ತರಪ್ರದೇಶದಲ್ಲಿ ಈಗಾಗಲೇ 5 ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, 6ನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಕೊನೆಯ ಅಂದರೆ 7ನೇ ಹಂತದ ಚುನಾವಣೆ ಮಾರ್ಚ್ 8 ರಂದು ವಾರಣಾಸಿ  ಮತ್ತಿತರ ಕ್ಷೇತ್ರಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ವಾರಣಾಸಿಯಲ್ಲಿ ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಪೈಪೋಟಿ ಎಂಬಂತೆ ಸಮಾಜವಾದಿ-ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷಗಳು  ಕೂಡ ಭರ್ಜರಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com