ತ್ರಾಲ್ ಎನ್ ಕೌಂಟರ್ ಅಂತ್ಯ: 2 ಉಗ್ರರನ್ನು ಸದೆಬಡಿದ ಸೇನೆ, ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್'ನಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್'ನಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭಾನುವಾರ ತಿಳಿದುಬಂದಿದೆ. 
ದಕ್ಷಿಣ ಕಾಶ್ಮೀರದ ಪುಲ್ಮಾಮ ಜಿಲ್ಲೆಯ ತ್ರಾಲ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಉಗ್ರರ ಅಡಗಿಕುಳಿತಿರುವ ಬಗ್ಗೆ ಗುಪ್ತಚರ ಇಲಾಖೆ ಸೇನಾ ಪಡೆಗೆ ಮಾಹಿತಿ ನೀಡಿದೆ. ಕೂಡಲೇ ಸಿದ್ಧರಾದ ಯೋಧರು ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು. ಸೇನಾ ಪಡೆ ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ಕೆಲ ಸ್ಥಳೀಯರು ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ಸೇನಾ ಪಡೆಗಳ ಮೇಲೆ ಕೆಲವರು ಕಲ್ಲುತೂರಾಟವನ್ನು ನಡೆಸಿದ್ದಾರೆ. 
ನಂತರ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸ್ಥಳೀಯ ಅಧಿಕಾರಿಗಳು ಸೆಕ್ಷನ್ 147 ಜಾರಿ ಮಾಡಿದ್ದರು. ಇದರಂತೆ ನಿಷೇಧಿತ ಸ್ಥಳದಲ್ಲಿ ನಾಲ್ಕರಿಂದ ಹೆಚ್ಚು ಜನರು ಗುಂಪು ಕಟ್ಟಿಹೋಗದಂತೆ ಸೂಚನೆ ನೀಡಲಾಯಿತು. ಅಲ್ಲದೆ, ಕೆಲ ಸಮಯಗಳ ಕಾಲ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. 
ಸೇನಾ ಪಡೆ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಉಗ್ರರು ಎರಡೂ ಕಡೆಗಳಿಂದಲೂ ಸೇನಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಈ ವೇಳೆ ಓರ್ವ ಪೇದೆ ಹುತಾತ್ಮನಾಗಿದ್ದು, ಓರ್ವ ಸಿಆರ್'ಪಿಎಫ್ ಯೋಧ ಗಂಭೀರವಾಗಿ ಗಾಯಗೊಂಡಿದ್ದಾನೆ. ನಂತರ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ ಯೋಧರು, ಉಗ್ರರು ಅಡಗಿ ಕುಳಿತಿದ್ದ ಮನೆಯನ್ನೇ ನೆಲಕ್ಕೆ ಉರುಳಿಸಿದರು. ಅಲ್ಲದೆ, ಮನೆಯಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರನ್ನು ಇದೇ ವೇಳೆ ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. 
ಮೂಲಗಳ ಪ್ರಕಾರ ಇದೀಗ ಹತ್ಯೆಯಾಗಿರುವ ಇಬ್ಬರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ. ಇಬ್ಬರ ಪೈಕಿ ಓರ್ವ ಉಗ್ರ ಈ ಹಿಂದೆ ಕಾಶ್ಮೀರದಲ್ಲಿ ಎನ್ ಕೌಂಟರ್ ನಡೆಸಿ ಹತ್ಯೆ ಮಾಡಲಾಗಿದ್ದ ಉಗ್ರ ಬುರ್ಹಾನ್ ವಾನಿ ರೈಟ್ ಹ್ಯಾಂಡ್ ಸಬ್ಜರ್ ಭಟ್ ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ಉಗ್ರರನ್ನು ಅಕ್ವಿಬ್ ಎಂದು ಗುರ್ತಿಸಲಾಗಿದೆ. ಉಗ್ರರ ಮಟ್ಟ ಹಾಕಲು ಸೇನಾ ಪಡೆ ನಡೆಸುತ್ತಿದ್ದ ಕಾರ್ಯಾಚರಣೆ 
15 ಗಂಟೆಗಳ ಬಳಿಕ ಇದೀಗ ಅಂತ್ಯಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com