ವಿಶ್ವ ದಾಖಲೆ ಬರೆದ ಅಂಗವಿಕಲರ ಸಾಮೂಹಿಕ ವಿವಾಹ!
ಉಜ್ಜಯಿನಿ: ಮಧ್ಯ ಪ್ರದೇಶದ ಉಜ್ಜಯಿನಿ ನಗರ ಐತಿಹಾಸಿಕ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ಏಕಕಾಲಕ್ಕೆ 104 ಅಂಗವಿಕಲರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.
ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಿನ್ನೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶೇಷವೆಂದರೆ ಆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ಎಲ್ಲ ದಂಪತಿಗಳೂ ಅಂಗವಿಕಲರಾಗಿದ್ದರು. ಬರೊಬ್ಬರಿ 104 ಅಂಗವಿಕಲ ಜೋಡಿಗಳು ಏಕಕಾಲಕ್ಕೆ ದಾಪಂತ್ಯ ಜೀವನಕ್ಕೆ ಕಾಲಿಡುವ ಮೂಲಕ ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಸ್ವತಃ ಮಧ್ಯ ಪ್ರದೇಶ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, 104 ಅಂಗ ವಿಕಲ ಜೋಡಿಗಳು ಏಕಕಾಲಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ 104 ಜೋಡಿಗಳ ಪೈಕಿ 77 ಹಿಂದೂ ದಂಪತಿಗಳು, 26 ಮುಸ್ಲಿಂ ಹಾಗೂ ಒಂದು ಸಿಖ್ ಜೋಡಿ ಹಸೆ ಮಣೆ ಏರಿದ್ದರು. ಉಜ್ಜಯಿನಿ ಜಿಲ್ಲಾಡಳಿತ ಈ ವಿಶೇಷ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿತ್ತು, ಇದೇ ವೇಳೆ ವಿವಾಹಿತ ದಂಪತಿಗಳಿಗಾಗಿ ನೀಡಲು ಸಾರ್ವಜನಿಕರು ತಂದಿದ್ದ ವಿಶೇಷ ಉಡುಗೊರೆ ಕೂಡ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಸೇರಿದ್ದು, ಸಾರ್ವಜನಿಕರು ನೀಡಿದ ಅತೀದೊಡ್ಡ ಉಡುಗೊರೆ ಬಾಕ್ಸ್ ಎಂಬ ಕೀರ್ತಿಗೂ ಈ ವಿಶೇಷ ಉಡುಗೊರೆ ಭಾಜನವಾಯಿತು.
ಇದೇ ವೇಳೆ ಗೋಲ್ಡನ್ ಬುಕ್ ರೆಕಾರ್ಡ್ಸ್ ತಂಡ ಅಧಿಕಾರಿಗಳು ಮಧ್ಯ ಪ್ರದೇಶ ಸರ್ಕಾರಕ್ಕೆ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕೇಂದ್ರ ಸಚಿವ ತಾವರ್ ಚಾಂದ್ ಗೆಹ್ಲೂಟ್ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ