ನ್ಯಾಯಮೂರ್ತಿ ಕರ್ಣನ್ ವಿರುದ್ಧ ವಾರಂಟ್ ಜಾರಿ
ನ್ಯಾಯಮೂರ್ತಿ ಕರ್ಣನ್ ವಿರುದ್ಧ ವಾರಂಟ್ ಜಾರಿ

ನ್ಯಾಯಮೂರ್ತಿ ಕರ್ಣನ್ ವಿರುದ್ಧ "ಸುಪ್ರೀಂ" ನಿಂದ ವಾರಂಟ್ ಜಾರಿ!

ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ವಿಚಾರಣೆಗೆ ಖುದ್ದು ಹಾಜರಾಗುವಲ್ಲಿ ವಿಫಲರಾಗಿದ್ದ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಸಿ ಕರ್ಣನ್ ವಿರುದ್ಧ ಸುಪ್ರೀಂ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ.

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ವಿಚಾರಣೆಗೆ ಖುದ್ದು ಹಾಜರಾಗುವಲ್ಲಿ ವಿಫಲರಾಗಿದ್ದ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಸಿ ಕರ್ಣನ್ ವಿರುದ್ಧ ಸುಪ್ರೀಂ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ.

ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ನಿಂದನೆ ಪ್ರಕರಣ ದಾಖಲಾಗಿದ್ದು, ಜಸ್ಟಿಸ್‌ ಕರ್ಣನ್‌ ಅವರನ್ನು ಕಳೆದ ಫೆಬ್ರವರಿಯಲ್ಲಿ   ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ ಹೆಚ್ ಸಿ ಕರ್ಣನ್ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ. ಅಲ್ಲದೆ ವಾರಂಟ್ ಅನ್ನು  ಪಶ್ಚಿಮ ಬಂಗಾಳ ಡಿಜಿಪಿ ಅವರು ಖುದ್ದಾಗಿ ಹೆಚ್ ಸಿ ಕರ್ಣನ್ ಅವರಿಗೆ ನೀಡಿ, ಮಾರ್ಚ್ 31ರೊಳಗೆ ವಿಚಾರಣೆಗೆ ಹಾಜರು ಪಡಿಸುವಂತೆ ಆದೇಶ ಹೊರಡಿಸಿದೆ.

ಈ ಹಿಂದೆ ಜಸ್ಟಿಸ್‌ ಕರ್ಣನ್‌ ಅವರು ದೇಶದ ಹಲವು ಹಾಲಿ ಹಾಗೂ ಮಾಜಿ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.  ಇದರ ಬೆನ್ನಲ್ಲೇ ಮದ್ರಾಸ್‌ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರೊಬ್ಬರ ಪತ್ನಿ ಜಸ್ಟಿಸ್‌ ಕರ್ಣನ್‌ ಅವರು ತನ್ನ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ  ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್‌ ಈಗಾಗಲೇ ಜಸ್ಟಿಸ್‌ ಕರ್ಣನ್‌ ಅವರ ನ್ಯಾಯಾಂಗ ಮತ್ತು ಆಡಳಿತಾತ್ಮಕ ಜವಾಬ್ದಾರಿಯನ್ನು ಹಿಂಪಡೆದುಕೊಂಡಿದ್ದು, ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ  ಕೈಗೊಳ್ಳುವುದಾಗಿ ತಿಳಿಸಿದೆ. ಈ ಹಿಂದೆ ಜಸ್ಟಿಸ್‌ ಕರ್ಣನ್‌ ವಿರುದ್ಧ ಸಹೋದ್ಯೋಗಿ ನ್ಯಾಯಾಧೀಶರು ದೂರು ಸಲ್ಲಿಸಿದ ಕಾರಣ, ಕರ್ಣನ್‌ ಅವರನ್ನು ಮದ್ರಾಸ್‌ ಹೈಕೋರ್ಟಿನಿಂದ ಕೋಲ್ಕತಾ ಹೈಕೋರ್ಟ್ ಗೆ ವರ್ಗಾಯಿಸಲಾಗಿತ್ತು.

ಅನುಚಿತ ವರ್ತನೆ, ನ್ಯಾಯಾಂಗ ನಿಂದನೆ ಸೇರಿದಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಪತ್ನಿ ಮಾಡಿರುವ ಆರೋಪಗಳು ಸೇರಿದಂತೆ ಜಸ್ಟಿಸ್‌ ಕರ್ಣನ್‌ ವಿರುದ್ಧದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಭಾರತದ ಏಳು  ನ್ಯಾಯಾಧೀಶರ ಪೀಠ ನಡೆಸಲಿದೆ.

ದಲಿತನಾಗಿದ್ದರಿಂದ ತಾನು ಬಲಿಪಶು: ಜಸ್ಟಿಸ್ ಕರ್ಣನ್
ಇನ್ನು ಇದೇ ವೇಳೆ ತಮ್ಮ ವಿರುದ್ಧ ಎಲ್ಲ ಆರೋಪಗಳನ್ನೂ ಅಲ್ಲಗಳೆದಿರುವ ಕರ್ಣನ್ ಅವರು, ತಾನು ಓರ್ವ ದಲಿತನಾದ್ದರಿಂದ ತನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಬಲಿಪಶು ಮಾಡಲಾಗುತ್ತಿದೆ ಎಂದು ಸುಪ್ರೀಂ  ಕೋರ್ಟ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ಧದ ಪ್ರಕರಣವನ್ನು ಸಂಸತ್ತಿಗೆ ರವಾನಿಸಬೇಕು ಎಂದು ಹೇಳಿದ್ದರು. ಇನ್ನು ಮುಂದಿನ ವಿಚಾರಣೆಗೆ ಹಾಜರಾಗಲೇ ಬೇಕಿರುವ ಕರ್ಣನ್ ಅವರು 10 ಸಾವಿರ ರು. ಮೌಲ್ಯದ ಜಾಮೀನು ಹೊಂದಿರಲೇ ಬೇಕು ಎಂದು ಕಾನೂನು ತಜ್ಞರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com