ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋದ ಕಾಂಗ್ರೆಸ್, ಸಿಎಂ ಹರೀಶ್ ರಾವತ್ ಗೆ ಸೋಲು!
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮತ್ತೆ ಕಮಲ ಅರಳಿದ್ದು, ಎರಡನೇ ಬಾರಿಗೆ ಅಧಿಕಾರ ನೀಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಿರುವ ಮತದಾರ ಈ ಬಾರಿ ಬಿಜೆಪಿಗೆ ತನ್ನ ಬೆಂಬಲ ನೀಡಿದ್ದಾನೆ.
ಮತದಾನೋತ್ತರ ಸಮೀಕ್ಷೆಗಳಲ್ಲಿ ಸಿಎಂ ಹರೀಶ್ ರಾವತ್ ಸರ್ಕಾರಕ್ಕೆ ಬಹುಮತ ಎಂದು ಹೇಳಲಾಗಿತ್ತಾದರೂ, ಸಮೀಕ್ಷೆಗಳನ್ನು ಮೀರಿ ಮತದಾರ ಬಿಜೆಪಿಯನ್ನು ಬೆಂಬಲಿಸಿದ್ದಾನೆ. ಉತ್ತರಾಖಂಡ ವಿಧಾನಸಭೆಯ ಒಟ್ಟು 70 ಕ್ಷೇತ್ರಗಳ ಪೈಕಿ ಬಿಜೆಪಿ 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಪ್ರಮುಖವಾಗಿ ಉತ್ತರಾಖಂಡದಲ್ಲಿ ಸಿಎಂ ಹರೀಶ್ ರಾವತ್ ವರ್ಚಸ್ಸು ಕಳೆಗುಂದಿದ್ದು, ತಮ್ಮ ಕ್ಷೇತ್ರದಲ್ಲೇ ಹರೀಶ್ ರಾವತ್ ಸೋಲಿಗೆ ಶರಣಾಗಿದ್ದಾರೆ.
ಹರಿಧ್ವಾರ ಗ್ರಾಮಾಂತರ ಮತ್ತು ಕಿಚ್ಚಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹರೀಶ್ ರಾವತ್ ಅವರು ಸೋತಿದ್ದು, ಹರಿಧ್ವಾರ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ವಾಮಿ ಯತೀಶ್ವರಾನಂದ್ ಅವರ ವಿರುದ್ಧ ಒಟ್ಟು 12 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾರೆ. ಹರಿಧ್ವಾರ ಗ್ರಾಮಾಂತರ ಪ್ರದೇಶದಲ್ಲಿ ಹರೀಶ್ ರಾವತ್ ಅವರ ಪುತ್ರಿ ಅನುಪಮಾ ರಾವತ್ ಅವರೇ ಕಾಂಗ್ರೆಸ್ ಪಕ್ಷದ ಪ್ರಚಾರದ ನೇತೃತ್ವ ವಹಿಸಿಕೊಂಡಿದ್ದರು. ಹೀಗಿದ್ದೂ ತಮ್ಮ ತಂದೆಯವರು ಸೋತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಹರೀಶ್ ರಾವತ್ ಸ್ಪರ್ಧಿಸಿರುವ ಮತ್ತೊಂದು ಕ್ಷೇತ್ರ ಕಿಚ್ಚಾಲ್ಲೂ ಹರೀಶ್ ರಾವತ್ ಸೋಲುಕಂಡಿದ್ದು, ಕೇವಲ 42 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ