
ನವದೆಹಲಿ: ನ್ಯಾಯಾಂಗ ವ್ಯವಸ್ಥೆ ವಿರುದ್ಧ ಕಟುವಾಗಿ ಟೀಕೆ ಮಾಡಿ ನ್ಯಾಯಾಂಗ ನಿಂದನೆ ತೂಗುಗತ್ತಿಯಡಿಯಲ್ಲಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಕರ್ಣನ್ ಅವರ ವಿರುದ್ಧ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಕುರಿತಂತೆ ಕರ್ಣನ್ ಅವರು ಎತ್ತಿರುವ ಪ್ರಶ್ನೆಗಳ ಕುರಿತಂತೆ ಬಹಿರಂಗ ಪತ್ರವೊಂದನ್ನು ಬರೆದಿರುವ ರಾಮ್ ಜೇಠ್ಮಲಾನಿ ಅವರು, ಓರ್ವ ನ್ಯಾಯಾಧೀಶರಾಗಿದ್ದುಕೊಂಡು ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ. ಅಂತೆಯೇ ನ್ಯಾಯಾಂಗ ವ್ಯವಸ್ಥೆ ಕುರಿತು ತಾವಾಡಿರುವ ಮಾತುಗಳನ್ನು ಕೂಡಲೇ ಬೇಷರತ್ ಹಿಂಪಡೆಯುವಂತೆಯೂ ಸಲಹೆ ನೀಡಿದ್ದಾರೆ.
"ಓರ್ವ ವಕೀಲನಾಗಿ ನಾನು ಜೀವನ ಪರ್ಯಂತ ಹಿಂದುಳಿದ ವರ್ಗದವರಿಗಾಗಿ ಹೋರಾಡಿದ್ದೇನೆ. ವೈಯುಕ್ತಿಕವಾಗಿ ಹಿಂದುಳಿದ ವರ್ಗದವರಿಗೆ ಸಂಬಂಧಿಸಿದಂತೆ ನನ್ನಲ್ಲಿ ಅತೀವ ಕಾಳಜಿ ಮತ್ತು ಸಹಾನುಭೂತಿ ಇದೆ. ಆದರೆ ನೀವಾಡಿರುವ ಮಾತುಗಳು ಅವರ ಹಿತಾಸಕ್ತಿಗೆ ದೊಡ್ಡ ಹಾನಿಯನ್ನುಂಟು ಮಾಡುತ್ತಿವೆ. ಭ್ರಷ್ಟಾಚಾರ ಪ್ರಾಬಲ್ಯವಿರುವ ಈ ದೇಶದಲ್ಲಿ, ನ್ಯಾಯಾಂಗ ವ್ಯವಸ್ಥೆ ಮಾತ್ರ ಜನರನ್ನು ರಕ್ಷಿಸುವ ಏಕೈಕ ವ್ಯವಸ್ಥೆಯಾಗಿದ್ದು, ಅದನ್ನು ನಾಶಗೊಳಿಸುವ ಅಥವಾ ದುರ್ಬಲಗೊಳಿಸಬೇಡಿ" ಎಂದು ಜೇಠ್ಮಲಾನಿ ತಿಳಿಸಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಾರ್ಚ್ 31ರಂದು ಖುದ್ದಾಗಿ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ನ್ಯಾ. ಕರ್ಣನ್ ಅವರಿಗೆ ಈ ಹಿಂದೆ ಜಾಮೀನು ಸಹಿತ ವಾರೆಂಟ್ ಹೊರಡಿಸಿತ್ತು. ಈ ಪ್ರಕರಣಕ್ಕೂ ಮುನ್ನ ಮತ್ತು ನಂತರ ಕರ್ಣನ್ ಅವರು ನ್ಯಾಯಾಂಗ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರು.
Advertisement