ಮತ ಧ್ರುವೀಕರಣದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ: ರಾಹುಲ್ ಗಾಂಧಿ

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭೂತಪೂರ್ವ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭೂತಪೂರ್ವ ಗೆಲುವಿಗೆ ಮುಖ್ಯ ಕಾರಣ ಮತ ಧ್ರುವೀಕರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.  
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. ನಾನು ಅವರನ್ನು ಅಭಿನಂದಿಸಲು ಇಚ್ಛಿಸುತ್ತೇನೆ. ಅವರ ಗೆಲುವಿಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಒಂದು ಧ್ರುವೀಕರಣ ಎಂದು ಮಾಧ್ಯಮಗಳಿಗೆ ಇಂದು ಸಂಸತ್ತು ಹೊರಗೆ ಪ್ರತಿಕ್ರಿಯೆ ನೀಡಿದರು.
ಸ್ಥಳೀಯ ನಾಯಕರನ್ನು ಮುಂದೆ ಬರಲು ಬಿಡುವುದಿಲ್ಲ ಮತ್ತು ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ತಳ್ಳಿ ಹಾಕಿದ ರಾಹುಲ್ ಗಾಂಧಿ, ನಾವು ಪಂಜಾಬ್ ನಲ್ಲಿ ಸರ್ಕಾರ ರಚಿಸಿದ್ದೇವೆ. ಮಣಿಪುರ ಮತ್ತು ಗೋವಾಗಳಲ್ಲಿ ಕೂಡ ನಾವು ಚುನಾವಣೆಯನ್ನು ಗೆದ್ದುಕೊಂಡಿದ್ದೇವೆ. ಹೀಗಿರುವಾಗ ನಮ್ಮ ಪಾಲಿಗೆ ಫಲಿತಾಂಶವೇನು ಕೆಟ್ಟದಾಗಿಲ್ಲ ಎಂದರು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಾವು ಸೋತಿರುವುದು ನಿಜ. ಪಂಜಾಬ್ ಮತ್ತು ಉತ್ತರಾಖಂಡ್ ಚುನಾವಣೆಗಳನ್ನು ನೋಡಿದರೆ ಅಲ್ಲಿ ಯಾರು ಚುನಾವಣೆಗಳನ್ನು ನಡೆಸುತ್ತಿರುವುದು? ಸ್ಥಳೀಯ ನಾಯಕರು ಅಲ್ಲಿ ಚುನಾವಣೆಗಳನ್ನು ನಡೆಸುವುದು. ಗೋವಾ, ಪಂಜಾಬ್ ಮತ್ತು ಮಣಿಪುರಗಳಲ್ಲಿ ಸ್ಥಳೀಯ ನಾಯಕರೇ ಚುನಾವಣೆಗಳನ್ನು ಎದುರಿಸಿ ಗೆದ್ದಿರುವುದು ಎಂದರು.
ಪಕ್ಷದೊಳಗೆ ಹಲವು ರಚನಾತ್ಮಕ ಮತ್ತು ಸಾಂಸ್ಥಿಕ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ವಿಧಾನಸಭೆಯ 403 ಸೀಟುಗಳಲ್ಲಿ 312 ಸೀಟುಗಳನ್ನು ಬಿಜೆಪಿ ಗೆದ್ದಿದ್ದು ಅದರ ಮೈತ್ರಿಕೂಟ 13 ಸೀಟುಗಳಲ್ಲಿ ಗೆದ್ದುಕೊಂಡಿದೆ. ಉತ್ತರಾಖಂಡ್ ನಲ್ಲಿ 70 ಸೀಟುಗಳ ಪೈಕಿ 57 ಸೀಟುಗಳನ್ನು ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com