
ಚಂಡೀಘಡ್: ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದು, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸೇರಿದಂತೆ 9 ಮಂತಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪಂಜಾಬ್ ರಾಜಭವನದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ರಾಜ್ಯಪಾಲ ವಿಪಿ ಸಿಂಗ್ ಬದ್ನೋರ್ ಅವರು ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಇತರೆ 9 ಮಂದಿ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು, ಪಂಜಾಬ್ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಅಮರೀಂದರ್ ಸಿಂಗ್ ಅವರೊಂದಿಗೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಪಕ್ಷದ ಹಿರಿಯ ಮುಖಂಡ ಬ್ರಹ್ಮ್ ಮೊಹಿಂದ್ರಾ, ತ್ರಿಪ್ಟ್ ರಾಜೀಂದರ್ ಸಿಂಗ್ ಬಜ್ವಾ, ರಾಣಾ ಗುರ್ಜಿತ್ ಸಿಂಗ್, ಚರಣ್ ಸಿಂಗ್ ಚನ್ನಿ ಹಾಗೂ ಸಧುಸಿಂಗ್ ಧರಮ್ ಸೋತ್ ಅವರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಮರೀಂದರ್ ಸಿಂಗ್ ರಿಂದ ಮಾತ್ರ ಸಿಧು ಖಾತೆ ಹಂಚಿಕೆ
ಇನ್ನು ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಕಾಂಗ್ರೆಸ್ ಪಕ್ಷ ಸೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸಿಧುಗೆ ಸಚಿವ ಸ್ಥಾನ ನೀಡದಂತೆ ಸಾಕಷ್ಟು ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದೂ ರಾಹುಲ್ ಗಾಂಧಿ ಅವರ ಒತ್ತಾಯದ ಮೇರೆಗೆ ಸಿಧುಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಸಿಧುಗೆ ಯಾವ ಖಾತೆ ನೀಡಬೇಕು ಎನ್ನುವುದನ್ನು ಮಾತ್ರ ನೂತನ ಸಿಎಂ ಅಮರೀಂದರ್ ಸಿಂಗ್ ಅವರು ಮಾತ್ರ ನಿರ್ಧರಿಸಲಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ಪಂಜಾಬ್ ಕಾಂಗ್ರೆಸ್ ಮೂಲಗಳು ತಿಳಿಸಿವೆ.
Advertisement