
ನವದೆಹಲಿ: ಕೊಲ್ಕೋತಾ ನ್ಯಾಯಾಧೀಶ ಸಿ.ಎಸ್ ಕರ್ಣನ್ ವಿರುದ್ಧ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಬೆನ್ನಲ್ಲೇ, ಜಸ್ಟೀಸ್ ಕರ್ಣನ್ ಸುಪ್ರೀಂಕೋರ್ಟ್ ಗೆ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ನ ಆದೇಶಗಳು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿವೆ. ಆದ್ದರಿಂದ 14 ಕೋಟಿ ರುಪಾಯಿಯನ್ನು ಪರಿಹಾರವಾಗಿ ನೀಡಬೇಕು ಎಂದು ಕೇಳಿದ್ದಾರೆ.
ಎರಡು ಪುಟಗಳ ಪತ್ರ ಬರೆದಿರುವ ಕರ್ಣನ್, ಅಸಂವಿಧಾನಿಕ ಪೀಠ ರಚಿಸಿದ್ದೀರಿ, ಭಾರತೀಯ ಸಂವಿಧಾನಾತ್ಮಕ ಕಾನೂನು ನಿಯಮಗಳನ್ನು ಮುರಿದು ನನ್ನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದೀರಿ, ನಾನು ದಲಿತ ಎಂಬ ಉದ್ದೇಶದಿಂದ ನನಗೆ ಕಿರುಕುಳ ನೀಡುತ್ತಿದ್ದೀರಿ ಎಂದು ಕರ್ಣನ್ ಪತ್ರದಲ್ಲಿ ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಎಂದರೆ ಗೌರವಾನ್ವಿತ ವ್ಯಕ್ತಿ, ಎರಡು ಕಡೆಯವರ ವಾದ ಕೇಳಿ ಕಾನೂನು ಬದ್ದವಾಗಿ ನ್ಯಾಯಯುತವಾದ ಆದೇಶ ನೀಡುವವರು, ಮುಖ್ಯ ನ್ಯಾಯಮೂರ್ತಿಗಳು ಮತ್ತು ಉಳಿದ ಅರು ನ್ಯಾಯಮೂರ್ತಿಗಳಲ್ಲಿ ನಾನು ಮನವಿ ಮಾಡುವುದೇನೇಂದರೇ ಅಸಂವಿಧಾನಿಕ ಪೀಠವನ್ನು ರದ್ದುಗೊಳಿಸಿ, ನಾನು ಸಹಜವಾಗಿ ಕೆಲಸ ಮಾಡಲು ಬಿಡಿ, ನನ್ನ ಮಾನಸಿಕ ನೆಮ್ಮದಿ ಹಾಗೂ ಸಹಜ ಜೀವನ ಹಾಳು ಮಾಡಿದ್ದಕ್ಕಾಗಿ ಹಾಗೂ 120 ಕೋಟಿ ಭಾರತೀಯರ ಮುಂದೆ ನನ್ನನ್ನು ಅವಮಾನ ಮಾಡಿದ್ದಕ್ಕಾಗಿ ನೀವು 7 ಮಂದಿ ನ್ಯಾಯಾಧೀಶರು ನನಗೆ 14 ಕೋಟಿ ರು ಹಣ ಪರಿಹಾರ ನೀಡಿ ಎಂದು ಪತ್ರ ಬರೆದಿದ್ದಾರೆ.
7 ದಿನಗಳ ಒಳಗಾಗಿ ಈ 7 ಮಂದಿ ನ್ಯಾಯಾಧೀಶರು ನನಗೆ 14 ಕೋಟಿ ರು ಪರಿಹಾರ ಹಣ ನೀಡಿದಿದ್ದರೇ, ನಿಮ್ಮ ನ್ಯಾಯಾಂಗ ಹಾಗೂ ಆಡಳಿತಾತ್ಮಕ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತೇನೇ ಎಂದು ಕರ್ಣನ್ ತಿಳಿಸಿದ್ದಾರೆ.
ಕೊಲ್ಕತ್ತಾ ಹೈ ಕೋರ್ಟ್ ನ ನ್ಯಾಯಮೂರ್ತಿ ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಗೆ ಆದೇಶಿಸಿತ್ತು. ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಆದರೆ ಸುಪ್ರೀಂ ಆದೇಶವನ್ನು ಪಾಲಿಸದ ಕರ್ಣನ್, ಕೋರ್ಟ್ ಗೆ ಕೂಡ ಹಾಜರಾಗಲಿಲ್ಲ. ತಾನು ದಲಿತ ಎಂಬ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದು, ತೀವ್ರ ಚರ್ಚೆಗೆ ಕಾರಣವಾಯಿತು. ಮದ್ರಾಸ್ ಹೈಕೋರ್ಟ್ ನಿಂದ ಕಲ್ಕತ್ತಾಗೆ ವರ್ಗಾವಣೆ ಮಾಡಿದ ಬಗ್ಗೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂನ ಕೂಡ ಕರ್ಣನ್ ಪ್ರಶ್ನೆ ಮಾಡಿದ್ದರು. ಹಿರಿಯ ವಕೀಲ ಕೆಕೆ ವೇಣುಗೋಪಾಲ್ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ, ನ್ಯಾ.ಕರ್ಣನ್ ಅವರು ಮಾಡುತ್ತಿರುವ ನಿಂದನೆ ಹಾಗೂ ಆರೋಪದ ವಿರುದ್ಧ ರಕ್ಷಣೆ ಒದಗಿಸಬೇಕು ಎಂದು ಕೇಳಿದ್ದರು.
Advertisement