ಉ.ಪ್ರ ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್ ಗಣಿತ ಪದವೀಧರ! ಇಲ್ಲಿದೆ ಅವರ ಬಗ್ಗೆ ಇನ್ನಷ್ಟು ವಿವರ

ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇವಲ ಸನ್ಯಾಸಿ ಮಾತ್ರ ಅಲ್ಲ, ಅವರಿಗೆ ಉತ್ತಮ ವಿದ್ಯಾರ್ಹತೆಯೂ ಇದೆ...
ಉತ್ತರ ಪ್ರದೇಶದ ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್
Updated on
ಗೋರಖ್ ಪುರ: ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇವಲ ಸನ್ಯಾಸಿ ಮಾತ್ರ ಅಲ್ಲ, ಅವರಿಗೆ ಉತ್ತಮ ವಿದ್ಯಾರ್ಹತೆಯೂ ಇದೆ. ಬಿಎಸ್ ಸಿ ಪದವೀಧರರಾಗಿರುವ ಯೋಗಿ ಆದಿತ್ಯನಾಥ್ ಗಣಿತಶಾಸ್ತ್ರದಲ್ಲಿಯೂ ನಿಷ್ಣಾತರು. ರಜಪೂತ್ ಮನೆತನದ ಪೋಷಕರ ಮಗನಾಗಿದ್ದ ಯೋಗಿ ಆದಿತ್ಯನಾಥ್ ಅವರ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್. ಹುಟ್ಟಿದ್ದು 1972 ರ ಜೂ.5 ರಂದು. 
ಯೋಗಿ ಆದಿತ್ಯನಾಥ್ ಅವರ ಪೂರ್ವಾಶ್ರಮದ ಬಗ್ಗೆ ಅತ್ಯಂತ ಕಡಿಮೆ ಜನರಿಗೆ ತಿಳಿದೆ. ಪದವಿ ಪಡೆದ ನಂತರ ಸನ್ಯಾಸಾಶ್ರಮದಲ್ಲಿ ಆಸಕ್ತಿ ತೋರಿದ ಅಜಯ್ ಸಿಂಗ್, 21 ವರ್ಷದವರಾಗಿದ್ದಾಲೇ ಗೋರಖ್ ಪುರದ ಗೋರಖ್ ನಾಥ್ ಮಠದ ಸಂತರಾಗಿದ್ದ ಮಹಾಂತ್ ಅವೈದ್ಯನಾಥ್ ಅವರನ್ನು ಆಶ್ರಯಿಸಿದ್ದರು. 
ಗುರುಗಳ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಗ್ರಂಥಗಳನ್ನು ಅಧ್ಯಯನ, ಗೋವುಗಳ ರಕ್ಷಣೆ ಮಾಡುವುದು ಸೇರಿದಂತೆ ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಕೆಲವೇ ವರ್ಷಗಳಲ್ಲಿ ಮಹಾಂತ್ ಅವೈದ್ಯನಾಥ್ ಅವರ ನೆಚ್ಚಿನ ಶಿಷ್ಯರಾದ ಅಜಯ್ ಸಿಂಗ್, ಯೋಗಿ ಆದಿತ್ಯನಾಥ್ ಎಂಬ ಹೆಸರಿನ ಮೂಲಕ ಗೋರಖ್ ಪುರದ ಗೋರಖ್ ನಾಥ್ ಮಠದ ಉತ್ತರಾಧಿಕಾರಿಯಾಗಿಯೂ ನೇಮಕಗೊಂಡರು. ತಮ್ಮ ಅವಧಿಯಲ್ಲಿ ಗೋರಖ್ ನಾಥ್ ಮಠದ ಮೂಲಕ ಅನೇಕ ಶಾಲಾ ಕಾಲೇಜುಗಳನ್ನು, ಆಸ್ಪತ್ರೆಗಳನ್ನು ಪ್ರಾರಂಭಿಸಿ ನಿರ್ವಹಿಸುವ ಮೂಲಕ ಅನೇಕ ಜನಪರ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ ಯೋಗಿ ಆದಿತ್ಯನಾಥ್ ಅವರಿಗೆ ರಾಜಕೀಯದ ಗೀಳು ಹತ್ತಿದ್ದು 1996 ರಲ್ಲಿ. ಯೋಗಿ ಆದಿತ್ಯನಾಥ್ ಅವರ ಗುರುಗಳಾಗಿದ್ದ ಮಹಾಂತ್ ಅವೈದ್ಯನಾಥ್ ಸಹ ರಾಜಕೀಯದಲ್ಲಿಯೇ ಇದ್ದವರಾದ್ದರಿಂದ ಉತ್ತರಾಧಿಕಾರಿಯಾದ ಯೋಗಿ ಆದಿತ್ಯನಾಥ್ ಅವರಿಗೆ ಗುರುಗಳ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಸಹಜವಾಗಿಯೇ ಹೆಗಲೇರಿತ್ತು. 
1998 ರಲ್ಲಿ ಮಹಾಂತ್ ಅವೈದ್ಯನಾಥ್ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ನಂತರ ಯೋಗಿ ಆದಿತ್ಯನಾಥ್ ಅವೈದ್ಯನಾಥ್ ಅವರ ರಾಜಕೀಯ ಉತ್ತರಾಧಿಕಾಯೂ ಆದರು. ನಂತರದ್ದು ಇತಿಹಾಸ. 1998 ರಲ್ಲಿ ಕೇವಲ 26 ವರ್ಷದವರಾಗಿದ್ದ ಯೋಗಿ ಆದಿತ್ಯನಾಥ್ 12 ನೇ ಲೋಕಸಭೆಯ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದಾದ ಬಳಿಕ 1999, 2004, 2009, 2014 ರ ವರೆಗೂ ನಿರಂತರವಾಗಿ ಉತ್ತರ ಪ್ರದೇಶದ ಜನತೆ ಯೋಗಿ ಆದಿತ್ಯನಾಥ್ ಅವರನ್ನು ಸಂಸತ್ ಗೆ ಆಯ್ಕೆ ಮಾಡಿದ್ದಾರೆ. ಈಗ ಮುಖ್ಯಮಂತ್ರಿಯ ಪದಗ್ರಹಣದ ಮೂಲಕ ಉತ್ತರ ಪ್ರದೇಶವನ್ನು ಮುನ್ನಡೆಸುವ ಹೊಸ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com