ಪಂಜಾಬ್ ಸರ್ಕಾರದ ಆಫರ್ ಗೆ ಬೇಡ ಎಂದ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್!
ಚಂಡೀಘಡ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ವಿಪಕ್ಷ ಸ್ಥಾನದ ಅರ್ಹತೆ ಕೂಡ ಕಳೆದುಕೊಂಡಿರುವ ಅಕಾಲಿ ದಳ ಮುಖ್ಯಸ್ಥ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರು ಸಿಎಂ ಅಮರೀಂದರ್ ಸಿಂಗ್ ಅವರ ಸರ್ಕಾರಿ ಬಂಗಲೆ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಸಿಎಂ ಆಗಿದ್ದ ಸಂದರ್ಭದಲ್ಲಿ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದ ಪ್ರಕಾಶ್ ಸಿಂಗ್ ಬಾದಲ್ ಇದೀಗ ಚುನಾವಣೆಯಲ್ಲಿ ಪರಾಭವಗೊಂಡು ಸರ್ಕಾರಿ ಬಂಗಲೆಯಿಂದ ಹೊರಬಿದಿದ್ದಾರೆ. ಪ್ರಸ್ತುತ ಪ್ರಕಾಶ್ ಸಿಂಗ್ ಬಾದಲ್ ಮನೆ ಹುಡುಕಾಟದಲ್ಲಿ ತೊಡಗಿದ್ದರಾದರೂ, ಸಿಎಂ ಅಮರೀಂದರ್ ಸಿಂಗ್ ಅವರು ಸರ್ಕಾರಿ ಬಂಗಲೆ ನೀಡುವ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. "ಅಮರೀಂದರ್ ಸಿಂಗ್ ಅವರ ಆತ್ಮೀಯತೆಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ನಾನು ನನ್ನ ಮನೆಯನ್ನು ನಾನೇ ಹುಡುಕಿಕೊಳ್ಳಬಲ್ಲೆ. ಸರ್ಕಾರಿ ಬಂಗಲೆಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಪ್ರಕಾಶ್ ಸಿಂಗ್ ಬಾದಲ್ ಸೆಕ್ಟರ್ 8 ಪ್ರದೇಶದಲ್ಲಿ ಒಂದುವಾರದ ಮಟ್ಟಿಗೆ ತಂಗಿದ್ದಾರೆ. ಸೆಕ್ಟರ್ 9 ಪ್ರದೇಶದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಕುಟುಂಬದ ಒಡೆತನ ವಿರುವ ಸುಮಾರು 1.5 ಎಕರೆ ಪ್ರದೇಶದ ಹಳೆಯ ನಿವಾಸವಿದ್ದು, ಅಲ್ಲಿನ ಹಳೆಯ ಕಟ್ಟಡವನ್ನು ಹೊಡೆದು ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ತಾತ್ಕಾಲಿಕ ಅನುಕೂಲಕ್ಕಾಗಿ ಪ್ರಕಾಶ್ ಸಿಂಗ್ ಬಾದಲ್ ಅವರು ಮನೆ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಟೋನಿ ಸೆಕ್ಟರ್ 2 ಸರ್ಕಾರಿ ಬಂಗಲೆಯಲ್ಲಿ ತಂಗಿದ್ದರು.
ಫೆಬ್ರವರಿ ನಾಲ್ಕರಂದು ನಡೆದ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ಮೈತ್ರಿಕೂಟ ಹೀನಾಯವಾಗಿ ಸೋತಿತ್ತು. ಕನಿಷ್ಟ ಪಕ್ಷ ವಿರೋಧ ಪಕ್ಷದ ಅರ್ಹತೆ ಪಡೆಯುವಲ್ಲಿಯೂ ಅಕಾಳಿದಳ ವಿಫಲವಾಗಿತ್ತು. ಹೀಗಾಗಿ ಪ್ರಕಾಶ್ ಸಿಂಗ್ ಬಾದಲ್ ವಿಪಕ್ಷ ನಾಯಕ ಸ್ಥಾನ ಕಳೆದುಕೊಂಡಿದ್ದರು. ಅಂತೆಯೇ ಸರ್ಕಾರಿ ಬಂಗಲೆಯಿಂದಲೂ ಹೊರಬಿದ್ದಿದ್ದರು. ಇದೇ ಕಾರಣಕ್ಕೆ ಸೌಜನ್ಯದ ದೃಷ್ಠಿಯಿಂದ ಸಿಎಂ ಅಮರೀಂದರ್ ಸಿಂಗ್ ಅವರು ಸರ್ಕಾರಿ ಬಂಗಲೆಯಲ್ಲಿ ತಂಗುವಂತೆ ಮನವಿ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ