ನವದೆಹಲಿ: ಕಾಂಗ್ರೆಸ್ ನ ಮಾಜಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಕರ್ನಾಟಕದಲ್ಲಿ ಕೃಷ್ಣ ಅವರಿಗಿರುವ ಪ್ರಗತಿಪರ ವ್ಯಕ್ತಿತ್ವದಿಂದ ಕೇಸರಿ ಪಕ್ಷಕ್ಕೆ ಬಲ ಸಿಗಲಿದೆ ಎಂದು ಹೇಳಿದ್ದಾರೆ.
ಕೃಷ್ಣ ಅವರು ದೇಶದ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರು. ಅವರ ಬಗ್ಗೆ ಇರುವ ಜನಪ್ರಿಯ, ಅಭಿವೃದ್ಧಿಶೀಲ ಕಾಳಜಿಯಿಂದಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ದೊರಕಲಿದೆ. ಅವರನ್ನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಅವರು ಬಿಜೆಪಿಗೆ ಸೇರಲು ಆಸಕ್ತಿ ತೋರಿಸಿದರು. ಅವರು ನನ್ನ ಸ್ನೇಹಿತನಾಗಿದ್ದು ಹಿರಿಯ ಸಹೋದ್ಯೋಗಿ ಕೂಡ ಹೌದು ಎಂದು ಹೇಳಿದರು.
ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿರುವ ಎಸ್.ಎಂ.ಕೃಷ್ಣ ಅವರು, ಕಳೆದ ವಾರ ತಮ್ಮ ಸೋದರಿಯ ನಿಧನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದರು.
84 ವರ್ಷದ ಎಸ್.ಎಂ.ಕೃಷ್ಣ ಅವರು ಜನವರಿ 29ರಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು.