
ನವದೆಹಲಿ: ಸೀಟಿನ ವಿಚಾರಕ್ಕೆ ಏರ್ಪಟ್ಟ ಜಗಳ ತಾರಕಕ್ಕೇರಿ ಏರ್ ಇಡಿಂಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಒಸ್ಮಾನಾಬಾದ್ ನ ಶಿವಸೇನೆ ಪಕ್ಷದ ಸಂಸದರಾಗಿರುವ ರವೀಂದ್ರ ಗಾಯಕ್ವಾಡ್ ವಿರುದ್ಧ ಹಲ್ಲೆಗೊಳಗಾದ ಏರ್ ಇಂಡಿಯಾ ಸಿಬ್ಬಂದಿ ಸುಕುಮಾರ್ ದೂರು ನೀಡಿದ್ದು, ದೂರಿನ ಅನ್ವಯ ಗಾಯಕ್ವಾಡ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಸ್ವತಃ ರವೀಂದ್ರ ಗಾಯಕ್ವಾಡ್ ಅವರೇ ಮಾಧ್ಯಮಗಳಲ್ಲಿ ಹೇಳಿಕೊಂಡಿರುವಂತೆ 60 ವರ್ಷದ ಹಿರಿಯ ಸಿಬ್ಬಂದಿ ಸುಕುಮಾರ್ ಮೇಲೆ ಹಲ್ಲೆ ಮಾಡಲಾಗಿದ್ದು, ಮತ್ತು ಘಟನೆಯಿಂದ ಸುಮಾರು 40 ನಿಮಿಷಕ್ಕೂ ಅಧಿಕ ಸಮಯ ವಿಮಾನ ಹಾರಾಟ ಸ್ಥಗಿತವಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ರವೀಂದ್ರ ಗಾಯಕ್ವಾಡ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಏರ್ ಇಂಡಿಯಾ ಸಂಸದನ ವಿರುದ್ಧ ಎರಡು ಎಫ್ ಐಆರ್ ದಾಖಲಿಸಿದ್ದು, ವಿಮಾನವನ್ನು ಉದ್ದೇಶ ಪೂರ್ವಕವಾಗಿ ತಡೆದಿದ್ದು ಮತ್ತು ಸಿಬ್ಬಂದಿ ಮೇಲೆ ವಿನಾಕಾರಣ ಹಲ್ಲೆ ಮಾಡಿದ ಪ್ರಸಂಗಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿದೆ.
ಸಂಸದನ ಸ್ಪಷ್ಟನೆ ಕೇಳಿದ ಶಿವಸೇನೆ
ಇನ್ನು ಏರ್ ಇಂಡಿಯಾ ಸಿಬ್ಬಂದಿಗೆ ಥಳಿಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಸಂಸದ ರವೀಂದ್ರ ಗಾಯಕ್ವಾಡ್ ಘಟನೆ ಸಂಬಂಧ ಸ್ಪಷ್ಟನೆ ನೀಡುವಂತೆ ಶಿವಸೇನೆ ಪಕ್ಷದ ಹಿರಿಯ ಮುಖಂಡರು ಸೂಚಿಸಿದ್ದಾರೆ.
ಕ್ಷಮೆ ಕೋರಲ್ಲ, ಸಂಸತ್ ನಲ್ಲಿ ಪ್ರಸ್ತಾಪಿಸುತ್ತೇನೆ
ಇನ್ನು ಸಿಬ್ಬಂದಿ ಮೇಲೆ ತಾವು ಮಾಡಿದ ಹಲ್ಲೆಯನ್ನು ಸಮರ್ಥಿಸಿಕೊಂಡಿರುವ ಸಂಸದ ಗಾಯಕ್ವಾಡ್ ಯಾವುದೇ ಕಾರಣಕ್ಕೂ ತಾವು ಸಿಬ್ಬಂದಿ ಕ್ಷಮೆ ಕೋರಲ್ಲ. ಈ ವಿಚಾರವನ್ನು ಸಂಸತ್ ನಲ್ಲಿ ಪ್ರಸ್ತಾಪಿಸುತ್ತೇನೆ. ಅವರು ಬೇಕಾದರೆ ದೂರು ನೀಡಲಿ. ತಪ್ಪು ಯಾರದು ಎಂಬುದು ನಿರ್ಧಾರವಾಗಲಿ ಎಂದು ಹೇಳಿದ್ದಾರೆ.
Advertisement