ಪ್ಯಾನ್ ಕಾರ್ಡ್, ಸಿಮ್ ಕಾರ್ಡ್ ಬಳಿಕ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಡ್ಡಾಯ!

ನಿನ್ನೆಯಷ್ಟೇ ಪ್ಯಾನ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಚಾಲಕರ ಪರವಾನಗಿಗೂ ಅಧಾರ್ ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೊಳಿಸಲು ಚಿಂತನೆಯಲ್ಲಿ ತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನಿನ್ನೆಯಷ್ಟೇ ಪ್ಯಾನ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಚಾಲಕರ ಪರವಾನಗಿಗೂ ಅಧಾರ್ ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೊಳಿಸಲು  ಚಿಂತನೆಯಲ್ಲಿ ತೊಡಗಿದೆ.

ಮೂಲಗಳ ಪ್ರಕಾರ ಹೊಸ ಚಾಲನ ಪರವಾನಗಿ ಪಡೆಯುವವರು ಮತ್ತು ಈಗಿರುವ ಪರವಾನಗಿಯನ್ನು ನವೀಕರಿಸುವವರೂ ಕೂಡ ಕಡ್ಡಾಯವಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕಿದೆ. ವಿವಿಧ ಆರ್ ಟಿಒಗಳಲ್ಲಿ ಒಂದೇ ಹೆಸರಿನಲ್ಲಿ  ಹಲವು ಚಾಲನಾ ಪರವಾನಗಿಗಳು ನೀಡಲಾಗುತ್ತಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಹಲವು ದೂರುಗಳು ಬರುತ್ತಿದ್ದು, ವಿವಿಧ ಅಪರಾಧ ಕೃತ್ಯಗಳಲ್ಲಿ ಈ ಪರವಾನಗಿಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿಗಳು  ಲಭ್ಯವಾಗಿವೆ. ಈ ಮಾಹಿತಿಗಳನ್ನಾಧರಿಸಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಚಾಲನಾ ಪರವಾನಗಿಗೂ ಆಧಾರ್ ಕಡ್ಡಾಯಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಚಾಲನಾ ಪರವಾನಗಿಗಳಿಗೆ ಆಧಾರ್ ಕಡ್ಡಾಯ ಮಾಡುವುದರಿಂದ ಒಂದೇ ಹೆಸರಲ್ಲಿ ಹಲವು ಪರವಾನಗಿಗಳನ್ನು ಹೊಂದಿರುವವರನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಂತೆಯೇ ಅಪರಾಧ ಕೃತ್ಯಗಳಲ್ಲಿ ಇವುಗಳು  ಬಳಕೆಯಾಗದಂತೆ ತಡೆಯಲು ಮತ್ತು ನಕಲಿ ಪರವಾನಗಿಗಳನ್ನು ಗುರುತಿಸಿ ನಾಶಪಡಿಸಲು ನೆರವಾಗುತ್ತದೆ ಎಂಬ ಕಾರಣದಿಂದಾಗಿ ಕೇಂದ್ರ ಸರ್ಕಾರ ಆಧಾರ್ ಕಡ್ಡಾಯಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಈಗಾಗಲೇ ದೇಶದ ಎಲ್ಲ ಆರ್ ಟಿಒ ಗಳಿಗೆ ಮಾಹಿತಿ ರವಾನಿಸಲಾಗಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಅಧಿಕೃತ ನಿರ್ಣಯ ಕೈಗೊಂಡು ಆದೇಶ ಜಾರಿ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com