ನ್ಯಾಯಾಧೀಶರ ವೇತನ ಶೇ.200ರಷ್ಟು ಏರಿಕೆಗೆ ಸರ್ಕಾರ ಸಮ್ಮತಿ!

ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ಸರ್ಕಾರದ ಈ ಅಂಗೀಕಾರದ ಪರಿಣಾಮ ಸುಪ್ರೀಂ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನದಲ್ಲಿ ಬರೊಬ್ಬರಿ ಶೇ. 200 ರಷ್ಟು ಏರಿಕೆಯಾಗಲಿದ್ದು, ಪರಿಷ್ಕೃತ ವೇತನ ಜಾರಿಯಾದರೆ, ಸುಪ್ರೀಂ ಕೋರ್ಟ್ ಮುಖ್ಯ  ನ್ಯಾಯಮೂರ್ತಿ ಮಾಸಿಕ 2.8 ಲಕ್ಷ ರು. ವೇತನ ಮತ್ತು ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು 2.5 ಲಕ್ಷ ರು. ಸಂಬಳ ಪಡೆಯುತ್ತಾರೆ. ಅಂತೆಯೇ ಹೈಕೋರ್ಟ್  ನ್ಯಾಯಮೂರ್ತಿಗಳ ಮಾಸಿಕ ವೇತನ 2.15 ಲಕ್ಷಕ್ಕೆ ಏರಿಕೆಯಾಗುತ್ತಿದೆ.

ನ್ಯಾಯಮೂರ್ತಿಗಳ ಸಂಬಳ ಏರಿಕೆ ಕುರಿತಂತೆ ನೇಮಕ ಮಾಡಲಾಗಿದ್ದ ಮೂರು ಮಂದಿ ನ್ಯಾಯಮೂರ್ತಿಗಳ ಸಮಿತಿ, ವೇತನ ಏರಿಕೆಯ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಿತ್ತು. ಈ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಕೆಲವು  ಬದಲಾವಣೆಗಳೊಂದಿಗೆ ಅಂಗೀಕರಿಸಿದ್ದು, ಶೀಘ್ರದಲ್ಲಿಯೇ ಸಂಪುಟ ಸಮಿತಿ ಇದಕ್ಕೆ ತನ್ನ ಅನುಮೋದನೆ ನೀಡಲಿದೆ.

ಸುಪ್ರೀಂ ಮುಖ್ಯ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಮಾಸಿಕ ಸಂಬಳ ಏರಿಕೆ, ಅವರಿಗೆ ಸಿಗುವ ಇತರೆ ಭತ್ಯೆಗಳನ್ನು  ಹೊರತುಪಡಿಸಿದೆ. ಹೀಗಾಗಿ ಸಂಬಳ ಏರಿಕೆಯ ಜೊತೆಗೆ, ತುಟ್ಟಿಭತ್ಯೆ, ಇತರೆ ಹೆಚ್ಚುವರಿ ಭತ್ಯೆಗಳು, ಕಾರು, ಬಂಗಲೆ, ಸಿಬ್ಬಂದಿ, ಇವೆಲ್ಲವೂ ಎಂದಿನಂತೆ ಸಂಬಳದ ಆಧಾರದಲ್ಲಿ ಏರಿಕೆಯಾಗುತ್ತವೆ.

10 ವರ್ಷಕ್ಕೆ ಒಮ್ಮೆ ವೇತನೆ ಏರಿಕೆ
ನ್ಯಾಯಮೂರ್ತಿಗಳ ವೇತನ ಪರಿಷ್ಕರಣೆ ಪ್ರತೀ 10 ವರ್ಷಕ್ಕೆ ನಡೆಯುತ್ತಿದೆ. ಏಳನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಏರಿಕೆಯ ಮಾದರಿಯಲ್ಲಿಯೇ ನ್ಯಾಯಮೂರ್ತಿಗಳ ಸಂಬಳ ಏರಿಕೆಯೂ  ಜಾರಿಯಾಗುತ್ತದೆ. ಸರ್ಕಾರ ಅಂಗೀಕರಿಸಿರುವ ನ್ಯಾಯಮೂರ್ತಿಗಳ ವೇತನ ಏರಿಕೆ ಕುರಿತಂತೆ ಸರ್ಕಾರ ಸಂಪುಟ ಸಮಿತಿಗೆ ಸೂಚನೆ ಕಳುಹಿಸುತ್ತದೆ. ಸಂಪುಟದಲ್ಲಿ ಅದಕ್ಕೆ ಅಂಗೀಕಾರ ದೊರೆತ ನಂತರ ಅದು ಸಂಸತ್ ಮುಂದೆ  ಚರ್ಚೆಗೆ ಬರುತ್ತದೆ. ವೇತನ ಏರಿಕೆಗೆ ಸಂಸತ್ ಅನುಮೋದನೆ ಕಡ್ಡಾಯವಾಗಿದ್ದು, ಸಂಸತ್ ಅನುಮೋದನೆ ಪಡೆದ ನಂತರವಷ್ಟೆ ಅದು ಜಾರಿಗೆ ಬರುತ್ತದೆ ಎಂದು ಆರ್ಥಿಕ ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com