
ನವದೆಹಲಿ: ಸಿಬ್ಬಂದಿಯನ್ನು ಥಳಿಸಿ ವಿಮಾನಯಾನ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿರುವ ಶಿವಸೇನೆ ಸಂಸದ ಇದೀಗ ಅನಿವಾರ್ಯವಾಗಿ ಕಾರಿನಲ್ಲೇ ದೆಹಲಿಗೆ ತೆರಳಿದ್ದಾರೆ.
ಏರ್ ಇಂಡಿಯಾದ ಕರ್ತವ್ಯನಿರತ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಎಲ್ಲ ಪ್ರಮುಖ ದೇಶಿಯ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿರುವ ಶಿವಸೇನೆಯ ಸಂಸದ ರವೀಂದ್ರ ಗಾಯಕವಾಡ್ ಅವರು ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ರಸ್ತೆ ಮೂಲಕ ತಮ್ಮ ಕಾರಿನಲ್ಲೇ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ದೆಹಲಿಗೆ ಪ್ರಯಾಣಿಸಲು ರವೀಂದ್ರ ಗಾಯಕ್ವಾಡ್ ಎರಡು ಬಾರಿ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ದರು. ಆದರೆ ಫೆಡರೇಷನ್ ಆಫ್ ಇಂಡಿಯನ್ ಏರ್ ಲೈನ್ಸ್ ಸಂಸ್ಥೆ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಿರುವುದರಿಂದ ಅವರ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ. ಹೀಗಾಗಿ ಅನಿವಾರ್ಯವಾಗಿ ರವೀಂದ್ರ ಗಾಯಕ್ವಾಡ್, ತಮ್ಮ ಕಾರಿನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬುಧವಾರ ಗಾಯಕ್ವಾಡ್ ದೆಹಲಿ ತಲುಪಿದ್ದಾರೆಯಾದರೂ ಲೋಕಸಭಾ ಕಲಾಪದಲ್ಲಿ ಭಾಗವಹಿಸಲಿಲ್ಲ. ಪಕ್ಷದ ನಾಯಕತ್ವವು ಅನುಮತಿಸಿದರೆ ಗುರುವಾರ ಅವರು ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಗುರುವಾರ ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರನ್ನು ಚಪ್ಪಲಿಯಿಂದ ಥಳಿಸಿ ಗಾಯಕವಾಡ್ ಭಾರಿ ಸುದ್ದಿಗೆ ಗ್ರಾಸವಾಗಿದ್ದರು.
Advertisement