'ಫೇಸ್ ಬುಕ್ ಗೆಳತಿ'ಯಿಂದ 6 ಲಕ್ಷ ಪಡೆದು ವಂಚನೆ ಆರೋಪ, ಎಂಬಿಎ ಪದವಿಧರನ ಬಂಧನ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ 50 ವರ್ಷದ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ 6 ಲಕ್ಷ ರುಪಾಯಿ ಪಡೆದು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ 50 ವರ್ಷದ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ 6 ಲಕ್ಷ ರುಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ 29 ವರ್ಷದ ಎಂಬಿಎ ಪದವಿಧರನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಮಾರ್ಪಾಡು ಮಾಡಿದ ಚಿತ್ರಗಳನ್ನು ಆನ್ ಲೈನ್ ಗೆ ಹಾಕುವುದಾಗಿ ಬೆದರಿಕೆ ಹಾಕಿ 6 ಲಕ್ಷ ರುಪಾಯಿ ಪಡೆದಿರುವುದಾಗಿ ಮಹಿಳೆಯ ಪತಿ ಮಾರ್ಚ್ 17ರಂದು ಎಂಬಿಎ ವಿದ್ಯಾರ್ಥಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮಹಿಳೆಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ತಮ್ಮ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಆದರೆ ಕಳೆದ 6 ತಿಂಗಳಿಂದ ಆರೋಪಿ ಮಹಿಳೆಯ ತಿರುಚಿದ ಚಿತ್ರಗಳನ್ನು ಆನ್ ಲೈನ್ ನಲ್ಲಿ ಹಾಕುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹೆದರಿದ ಮಹಿಳೆ 6 ಲಕ್ಷ ರುಪಾಯಿ ನೀಡಿದ್ದು, ಬಳಿಕ ಆರೋಪಿ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಪತಿಗೆ ವಿಚಾರ ತಿಳಿಸಿದ್ದು, ಬಳಿಕ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯ ಜೈಪುರದಲ್ಲಿ ಬಂಧಿಸಿದ್ದಾರೆ. ಆರೋಪಿ ನಗರದ ಕಾಲೇಜ್ ವೊಂದರಲ್ಲಿ ಎಂಬಿಎ ಮಾಡುತ್ತಾ ಮಾರ್ಬಲ್ ವ್ಯಾಪಾರ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮೊಬೈಲ್ ನಲ್ಲಿ ಮಹಿಳೆಯ ಆಕ್ಷೇಪಾರ್ಹ ಚಿತ್ರಗಳು ಪತ್ತೆಯಾಗಿದ್ದು, ಇದೇ ರೀತಿ ಬೇರೆ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿರುವ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com